ಮಡಿವಂತ


ಹಳ್ಳದ ನೀರಿನಲ್ಲಿ Paper ದೋಣಿ ತೇಲಾಡ್ತಾ ಇತ್ತು, ಧೋ ಅಂತ ಸುರಿತಾ ಇರೊ ಮಳೆ, ಆ ಮಕ್ಕಳಿಗಂತು ಸುರಿಯೋ ಮಳೆಯಲ್ಲಿ ಛತ್ರಿ ಹಿಡ್ಕೊಂಡು Paper ದೋಣಿ ಬಿಡೊ ಆಟ. ಮನೆ ಒಳಗಡೆ ಕೂತು ಕಿಟಕಿಯಲ್ಲಿ ಆ ಮಕ್ಕಳ ಆಟ ನೋಡ್ತಾ ಇದ್ದ ನನಗೆ ಅಮ್ಮ ಕಾಫಿ ಇಟ್ಟು ಕರೆದಿದ್ದೆ ಗೊತ್ತಿಲ್ಲ. ನಾನು ಚಿಕ್ಕ ವಯಸ್ಸಿನಲ್ಲಿ ಮಾಡ್ತಾ ಇದ್ದ ತರ್ಲೆ ಆಟ, ಅಪ್ಪ ಅಮ್ಮನ್ನ ಗೋಳು ಹೊಯ್ಕೊಂಡಿದ್ದು. ಗಣೇಶನ ಹಬ್ಬದ ದಿವಸ ಹೂ ಕೊಯ್ಯೊದಿಕ್ಕೆ ಅಂತ ಅನಂತನ ಜೊತೆ ತಾತಯ್ಯನ ಬೆಟ್ಟಕ್ಕೆ ಹೋಗಿದ್ದು, ವಾಪಸ್ ಬರೋ ದಾರಿಯಲ್ಲಿ ಝರಿ ಹತ್ರ ಮಳೆಗೆ ಕಾಲು ಜಾರಿ ಹೊಂಡಕ್ಕೆ ಬಿದ್ದು ಕಾಲು ಮುರ್ಕೊಂಡಿದ್ದು. 3 ವಾರ ಆಸ್ಪತ್ರೆ ಸೇರಿದ್ದು. ಹೀಗೆ ಒಂದೊಂದೇ ನೆನಪುಗಳು ನನ್ನನ್ನ ಯಾವುದೋ ಲೊಕಕ್ಕೆ ಕೊಂಡೊಯ್ದಿತ್ತು.

“ ಹೇ ವಿಘ್ನ… ಅಯ್ಯೋ ದೇವ್ರೆ ಆ ಕೆಸರಲ್ಲಿ ಎಂಥದ್ದೋ ನಿಮ್ಮ ಆಟ?” ದೂರದಿಂದ ಕೇಶವ ಮೂರ್ತಿ ಗಳ ಧ್ವನಿ,

ಆ ಧ್ವನಿ ಕೇಳಿ ಯಾವುದೋ ಪರಿಚಿತ ಧ್ವನಿ ಅಂತ ಅನ್ನಿಸ್ತು. ಹಾಗೆ ಕೂತಲ್ಲಿಂದಲೆ ಆ ಕಡೆ ತಿರುಗಿ ನೋಡ್ದೆ “ ಅರೆ ಕೇಶು ಮಾವ ಅಲ್ವ ಅದು” ‘’ಹೌದು ಅವ್ರೆ… ಕಮ್ಮಿ ಅಂದ್ರು ೧೦ ರಿಂದ ೧೨ ವರ್ಷ ಆಗಿರ್ಬೋದು ಈ ಪಾರ್ಟಿ ಊರು ಬಿಟ್ಟು, ಹತ್ತಿರದಲ್ಲಿರೋ ಗಿರಿಸಾಗರದಲ್ಲೇ ಇದ್ದರೂ ಕೂಡ ಒಂದು ದಿವಸವಾದ್ರು ತನ್ನ ಅಪ್ಪನನ್ನ ನೋಡೊದಿಕ್ಕಾಗಲಿ, ಅಪ್ಪನ ನಿರ್ಧಾರಕ್ಕೆ ಜೈ ಎಂದ ತನ್ನ ತಂಗಿ, ಭಾವ ಅಂದರೆ ನನ್ನ ಅಪ್ಪ-ಅಮ್ಮನನ್ನ ನೋಡೊದಿಕ್ಕಾಗಲಿ, ಯಾರ ಮನೆಗೂ ಕಾಲಿಡದೆ ತನ್ನ ಹಠವನ್ನೆ ಸಾಧಿಸಿದ ಮನುಷ್ಯ. ಇವತ್ತು ಇಲ್ಲಿ, ನಮ್ಮ ಮನೆ ಹತ್ರ?”

ನಾನು ಆಗ ತಾನೆ ದಿಲ್ಲಿಯಲ್ಲಿ ಕಾಲೇಜು ಸೇರಿದ್ದೆ, ಅದಾದ ಒಂದು ವಾರಕ್ಕೆ ನನ್ನ ಅಜ್ಜಯ್ಯ ತೀರಿಕೊಂಡಿದ್ರು, ಕಾಲೇಜು ಶುರು ಆಗಿದ್ದರಿಂದ ಅಜ್ಜಯ್ಯನ ಮುಖ ಕೊನೆ ಬಾರಿ ನೋಡಿಕೊಂಡು ಚಿಕ್ಕಪ್ಪನ ಜೊತೆ ನಾನು ದಿಲ್ಲಿಗೆ ವಾಪಾಸ್ ಆಗಿದ್ದೆ. ಮುಂದೆ ಕೇಶು ಮಾವನಿಗೆ ವಿಷಯ ತಿಳಿದ ನಂತರ ಬಂದು ಹಿರಿ ಮಗನ ಕರ್ತವ್ಯ ಪೂರೈಸಿದವರು ಮತ್ತೆ ವಾಪಸ್ ಹೊಗಲಿಲ್ಲ ಅಂತ ಅಮ್ಮ ಹೇಳಿದ್ದು ನೆನಪಿಗೆ ಬಂತು.

ಇಷ್ಟೆಲ್ಲಾ ಯೋಚನೆ ಮಾಡಿ ಮುಗಿಸೋ ಹೊತ್ತಿಗೆ ಮಳೆನೂ ಸ್ವಲ್ಪ ನಿಂತಿತ್ತು. ಕಿಟಕಿಯಿಂದ ಹೊರಗೆ ನೋಡಿದ್ರೆ ಮಕ್ಕಳು ಇಲ್ಲ, ಮಾವಾನು ಇಲ್ಲ? ಅಂದ್ರೆ ಅದು ಮಾವ ಅಲ್ವ?... ಸರಿ ಮಕ್ಕಳು ಎಲ್ಲಿ ಹೋದ್ರು? ಈ ಛಳಿ ಗಾಳಿಗೆ ಮುಖ ಒಡ್ಡಿ ಕೂತ್ರೆ ತಲೆನೆ ಓಡಲ್ಲ ಅಂತ ಯೊಚ್ನೆ ಮಾಡ್ತ ಹಾಗೆ ಎದ್ದು ಹೊರಗಡೆ ಹೋಗೋಣ ಅಂತ ಹೊರಟೆ. ಪಕ್ಕದ ಟೇಬಲ ನಲ್ಲಿ ಅಮ್ಮ ಇಟ್ಟಿದ್ದ ಬಿಸಿ ಬಿಸಿ ಕಾಫಿ ಈ ಥಂಡಿಗೆ ಕೆನೆ ಕಟ್ಟಿಕೊಂಡು ಕೋಲ್ಡ್ ಕಾಫಿ ಆಗಿತ್ತು.

ಒಳಗಡೆಯಿಂದ ಅಮ್ಮನ ಧ್ವನಿ


“ನಿದ್ದೆ ಮಾಡ್ತಾ ಇದಿಯೇನೊ ವಿಶ್ವ,.. ಏಳೊ ಆಗ್ಲೆ 6 ಗಂಟೆ ಆಗ್ತಾ ಬಂತು, ಹಾಗೆ ನಿಂಗು ಇನ್ನೊಂದ್ ಲೋಟ ಕಾಫಿ ಮಾಡ್ತಿನಿ ಬಾ”

“ಯಾಕಮ್ಮ ನಿಮ್ದು ಇನ್ನು ಕಾಫಿ ಆಗ್ಲಿಲ್ವ?” ಅಂತ ಕೇಳ್ದೆ

‘’ಕೇಶು ಮಾವ ಇಲ್ಲೆ ಅಂಗಡಿಗೆ ಹೋಗಿ ಬರ್ತೀನಿ ಅಂತ ಹೇಳಿ ಹೋದ, ಅವನಿಗೆ ಕಾಫಿ ಮಾಡೊದಿದೆ ನಿಂಗು ಮಾಡ್ತೀನಿ ಬಾ” ಅಂದ್ರು

ಓ ಹಾಗಿದ್ರೆ ನಾನು ಇಷ್ಟು ಹೊತ್ತು ನೋಡಿದ್ದು ಕನಸಲ್ಲ , ಮಾವ ಬಂದಿದ್ದು ನಿಜ ಅಂತ ಖಾತ್ರಿಯಾಯ್ತು.

ನಮ್ಮೂರಲ್ಲಿ ಏನ್ ಬೇಕಾದ್ರು ಎದುರಿಸ ಬಹುದು ಆದ್ರೆ ಇಲ್ಲಿನ ಮಳೆ, ಛಳಿಯನ್ನ ಎದುರಿಸಿ ನಿಲ್ಲೊಕ್ಕೆ ಆ ದೇವರಿಂದ ಮಾತ್ರ ಸಾಧ್ಯ ಅನ್ಸುತ್ತೆ. ಈ ಥಂಡಿಗೆ ಒಂದು ಹಂಡೆ ಪೂರ್ತಿ ಬಿಸಿ ಬಿಸಿ ನೀರಲ್ಲಿ ಸ್ನಾನ ಮಾಡೊ ಮನಸ್ಸಾಯಿತು. ಬಿಸಿ ನೀರು ಒಲೆ ಹತ್ರ ಹೊದ್ರೆ ನಮ್ ಚೆನ್ನಯ್ಯ ಆಗ್ಲೆ ಒಲೆ ಉರಿ ಉರಿಸಿ ಉಳಿದಿರೊ ಹಸಿ ಕಟ್ಟಿಗೇನ ಒಲೆ ಮುಂದೆ ಜೋಡಿಸಿ ಒಣಗಿಸೊಕೆಲಸಾನ ಶುರು ಮಾಡಿಕೊಂಡು ಬಿಟ್ಟಿದ್ದ. ಒಂದು ಆರ್ಧ ಗಂಟೆ ಬಿಟ್ಟು ಸ್ನಾನ ಮಾಡೊಣ ಅಂತ ಯೋಚನೆ ಮಾಡೊ ಹೊತ್ತಿಗಾಗಲೆ ಒಳಗಡೆಯಿಂದ ಕೇಶು ಮಾವನ ಧ್ವನಿನೂ ಕೇಳಿಸ್ತು, ಅಮ್ಮಾ ನನ್ನನ್ನ ಕೂಗೊದು ಕೇಳಿಸ್ತು,

ಬಹಳ ವರ್ಷಾನೆ ಆಗಿತ್ತು ಅವರನ್ನ ನೋಡಿ. ಟಿ.ವಿ. ಟೇಬಲ್ ಪಕ್ಕ ಇರೊ ಹಳೆ ಮಂಚದ ಮೇಲೆ ಮಾವನ ಪ್ರತಿಷ್ಟಾಪನೆ ಆಗಿತ್ತು. ಬಾಹ್ಯವಾಗಿ ಹೇಳೊವಷ್ಟು ಏನು ಬದಲಾಗಿಲ್ಲ, ಅದೇ ಸಣಕಲು ದೇಹ, ಅಲ್ಲಲ್ಲಿ ನೂಲು ಬಿಟ್ಟು ಕೊಂಡಿರೊ ಕೆಂಪು ಸ್ವೆಟ್ಟರ್, ಅದರ ಮೇಲೆ ಪೂರ್ತಿಯಾಗಿ ಹೊದ್ದು ಕೊಂಡ ಶಾಲು, ನೀರುಕಲೆಯಿಂದ ಕಪ್ಪಾಗಿರೊ ಬಿಳಿ ಪಂಚೆ, ತಲೆ ಮೇಲೊಂದು ಹಸಿರು ಮಂಕಿ ಕ್ಯಾಪ, ಜನಿವಾರದಲ್ಲಿ ನೇತಾಡ್ತಾ ಇರೊ ಕೀಲಿ ಕೈ ಗೊಂಚಲು.
“ಏನೊ ವಿಶ್ವ……….ಓಹೊಹೊ ಹುಡುಗ ತುಂಬ ಬದಲಾಗಿ ಬಿಟ್ಟಿದಾನೆ ಚಿಕ್ಕವನಿದ್ದಾಗ ನೋಡಿದ್ದು”  ಅಂತ ಮುಗುಳ್ನಕ್ಕರು
“ದಿಲ್ಲಿ ಗಾಳಿ ಪ್ರಭಾವ ಅಣ್ಣ ಇದು”   ಅಂತ ಅಮ್ಮಾನು ಮಧ್ಯೆ ಒಗ್ಗರಣೆ ಹಾಕಿ ಬಿಟ್ಳು.
“ಹಾಗೆನಿಲ್ಲ ಮಾವ”    ಅಂತ ಸಂಕೊಚದಿಂದ ನಾನು ಅವರ ಪಕ್ಕಾನೆ ಹೋಗಿ ಕೂತೆ, ಬೆನ್ನು ಸವರ್ತಾ
“ಮತ್ತೆ ದಿಲ್ಲಿಯಲ್ಲಿ  ರಾಘು ಭಾವ, ಅಕ್ಕ ಎಲ್ಲ ಹೇಗಿದಾರೆ, ಅವರನ್ನ ನೋಡಿನು ತುಂಬಾನೆ ವರ್ಷ ಆಯ್ತು”

ಹೀಗೆ ಎಷ್ಟೊ ವರ್ಷಗಳ ಹಳೆಯ ವಿಚಾರ, ಕಥೆ , ಉಪಕಥೆ ಸಮಯ ಹೋಗಿದ್ದೆ ಗೊತ್ತಾಗ್ಲಿಲ್ಲ. ಬಂದ ವಿಷಯವನ್ನೆ ಮರೆತ ಮಾವ ಹಾಗೆ ಹೊರಟು ನಿಂತ್ರು,

ಪಂಚೆ ಗಟ್ಟಿ ಮಾಡ್ಕೊಂಡು ಎದ್ದ ಮಾವನಿಗೆ ಮರೆತ ವಿಷಯ ನೆನಪಾಯ್ತು ಅಂತ ಕಾಣುತ್ತೆ


“ದೇವ್ರೇ ಮಾತಾಡ್ತ ಮಾತಾಡ್ತ ಬಂದ ವಿಷಯಾನೆ ಮರ್ತು ಬಿಟ್ಟೆ”    ಅಂತ ಮತ್ತೆ ಮಾತು ಶುರು ಹಚ್ಚಿಕೊಂಡ್ರು

“ನಾಡಿದ್ದು ಮನೆಯಲ್ಲಿ ಸತ್ಯನಾರಾಯಣ ಪೂಜೆ, ಬೆಳಿಗ್ಗೇನೆ ಮನೆಗೆ ಬಂದು ಬಿಡು ಆಯ್ತ” ಅಂದ್ರು

“ನಾಡಿದ್ದ… ಮಾವ ಯಾರೊ ಗೆಳೆಯ ಸಿಕ್ತೀನಿ ಅಂತ ಹೇಳಿದಾನೆ, ನಾನು ಸಂಜೆ ಬರ್ತೆನೆ, ಬೇಕಿದ್ರೆ ನಾಳೆ ಬೆಳಿಗ್ಗೆನು ಬರ್ತೆನೆ” ಅಂತ ರಾಗ ಎಳೆದೆ

“ಸಂಜೆಯ???” ಅಂತ ಏನೊ ಯೊಚನೆ ಮಾಡ್ತ,

“ನಿಂಗೆ ಅಷ್ಟು ಆಗ್ಲಿಲ್ಲ ಅಂದ್ರೆ ನಿನ್ನ ಗೆಳೆಯನನ್ನೂ ಕರ್ಕೊಂಡು ಮಧ್ಯಾನಕ್ಕೆ ಬಾ ಮಾರಾಯ”  

ಅಂತ ತಮ್ಮ ತೀರ್ಮಾನವನ್ನ ಹೇಳಿ ಮತ್ತೆ ಹೊರಡೊದಿಕ್ಕೆ ಅಣಿಯಾದ್ರು. ಪಕ್ಕದಲ್ಲಿ ಇಟ್ಟಿದ್ದ ತರಕಾರಿ ಚೀಲಾನ ಹಿಡ್ಕೊಂಡು ಅಮ್ಮನ ಹತ್ರ ಹೇಳಿ ಹೊರಟ್ರು, ಅಮ್ಮಾನು ಏನೊ ಕೆಲಸ ಅಂತ ಒಳಗಡೆ ಹೊರಟ್ರು.

 ಏನೊ ಜ್ನಾಪಿಸಿ ಕೊಂಡವರಂತೆ ಮಾವ ಮತ್ತೆ ತಿರುಗಿ

“ಹೇ ನಿನ್ನ ಗೆಳೆಯ ಅಂದ್ಯಲ್ಲ ಯಾರದು???”

ಈ ಪುರೋಹಿತ ಭಟ್ರ ಆಲೊಚನೆ ನಂಗೆ ಗೊತ್ತಿಲ್ವ, ನನ್ನ ಗೆಳೆಯ ಬ್ರಾಹ್ಮಣನೋ ಅಥವ ಬೇರೆಯವನೋ ಅಂತ ತಿಳ್ಕೊಳೊಕೆ

ಈ ಪ್ರಶ್ನೆ ಅಂತ ನಂಗೆ ಸ್ಪಷ್ಟ ಆಯ್ತು

“ಅದೆ ಮಾವ ನಮ್ ಕಾಶಿ ಭಟ್ರ ಮಗ ಅನಂತು” ಅಂತ ಹೇಳ್ದೆ,

ಅವನೂ ಬ್ರಾಹ್ಮಣನೆ,  ಮಾವನ ಸಂಶಯ ನಿವಾರಣೆ ಆಯ್ತು ಅಂತ ಅಂದ್ಕೊಂಡೆ. ಆದ್ರೆ ಸ್ವಲ್ಪ ಹೊತ್ತು ಮೌನಿಯಾಗಿ ಏನೊ
ಗಂಭೀರ ಯೊಚ್ನೆ ಶುರು ಹಚ್ಚಿಕೊಂಡ ಮಾವ

“ ನೀನು ನಿನ್ ಗೆಳೆಯನ್ ಜೊತೆ ಮಾತಾಡಿ ಸಂಜೆನೆ ಬಾ ಪರ್ವಾಗಿಲ್ಲ” ಅಂತ ಮೆದು ಧ್ವನಿಯಲ್ಲಿ ಹೇಳಿ, ಸೀದ ಬಾಗಿಲು ಕಡೆ ಹೊರಟ್ರು, ಬಾಗಿಲ ಹತ್ರ ಹೋದವರು

“ನಾಡಿದ್ದು ಬರೋದು ಮರಿಬೇಡ…. ನೀನು ಒಬ್ಬನೆ” ಅಂತ ಹೇಳಿದ ಮಾವ ಛತ್ರಿ ಬಿಡಿಸಿಕೊಂಡು ಸೀದ ಹೊರಟು ಹೋದ್ರು.

ಅವರ ಮುಖದಲ್ಲಿ ಏನೊ ಅಸಹನೆ ಇತ್ತು. ಈ ಕ್ಷಿಪ್ರ ಬದಲಾವಣೆಗೆ ಏನು ಕಾರಣ ಅನ್ನೋದೆ ಗೊತ್ತಗ್ಲಿಲ್ಲ.


ಮರು ದಿನ ಎದ್ದವನು ಸ್ನಾನ ತಿಂಡಿ ಮುಗಿಸಿ ಮಾವನ ಮನೆ ಕಡೆ ಹೆಜ್ಜೆ ಹಾಕಿದೆ. ಹಿಂದಿನ ದಿನ ಸಂಜೆ ಮಾವನ ಯೋಚನೆಯಲ್ಲಾದ ಬದಲಾವಣೆಗೆ ಕಾರಣ ಏನು ಅನ್ನೊದು ಗೊತ್ತೆ ಆಗಲಿಲ್ಲ, ನನ್ನ ಗೆಳೆಯ ಅನಂತು ಆಗಲಿ, ಅವರ ಅಪ್ಪ ಕಾಶಿ ಭಟ್ರಾಗಲಿ ಜಗಳಮಾಡೊ ಜಾಯಮಾನದವರಲ್ಲ, ತುಂಬಾ ಮರ್ಯಾದಸ್ತರು, ಅದು ಅಲ್ಲದೆ ಕಾಶಿ ಭಟ್ರು ಸತ್ತು ತುಂಬ ವರ್ಷ ಆಗಿದೆ, ಯಾವ ಕಾರಣಕ್ಕೆ ಮಾವ ಅನಂತ ಮನೆಗೆ ಬರಬಾರದು ಅನ್ನೊ ರೀತಿಯಲ್ಲಿ ಮಾತನಾಡಿದ್ರು ಅಂತ ಯೋಚನೆ ಮಾಡ್ತ ಮುಂದೆ ಸಾಗ್ತಾ ಇದ್ದೆ, ಕೃಷ್ಣಾಚಾರಿ ಮನೆಯಿಂದ 3ನೇ ಮನೇನೆ ಕೇಶು ಮಾವನ ಮನೆ, ನನ್ನ ಅಜ್ಜಯ್ಯ ಇದ್ದ ಮನೆ, ಅವರು ಇದ್ದಿದ್ದು ಇಲ್ಲೆ, ಸತ್ತಿದ್ದೂ ಇಲ್ಲೆ. ಗೇಟ್ ತೆಗೆದು ಮನೆ ಒಳಗೆ ಹೋದವನಿಗೆ ಕಾಣಿಸಿದ್ದು ಮನೆ ಜಗಲಿ, ಅಜ್ಜಯ್ಯ ಸಂಜೆ ಹೊತ್ತಲ್ಲಿ ನನ್ನನ್ನ ಕೂರುಸ್ಕೊಂಡು ಕಥೆ ಹೇಳ್ತಾ ಇದ್ದ ಜಗಲಿ.

ಅದೇ ಜಗಲಿನಲ್ಲಿ ಯಾರೊ ಒಬ್ಬ ಹುಡುಗ ಸ್ಲೇಟು ಬಳಪ ಹಿಡ್ಕೊಂಡು ಏನು ಬರಿತಿದ್ದೋನು ನಾನ್ ಬಂದಿದ್ದು ನೋಡಿ ಕಳ್ಳ ಬಂದಿದಾನೆ ಅನ್ನೋ ರೀತಿನಲ್ಲಿ ಎದ್ದವನು

‘’ಅಪ್ಪ….ಅಮ್ಮ ಯಾರೊ ಬಂದಿದಾರೆ”  ಅಂತ ಜಾರ್ತಾ ಇದ್ದ ಅವನ ಚಡ್ಡಿಯನ್ನ ಹಿಡ್ಕೊಂಡು ಒಳಗಡೆ ಓಡಿ ಹೋದ,

“ಯಾರದು….?”  ಅಂತ ರಾಗ ಎಳ್ಕೊಂಡು ಮಾವ ಹೊರಗಡೆ ಬಂದ್ರು. ಬಾಗಲಲ್ಲಿ ನನ್ನ ನೋಡಿ ಖುಷಿಯಿಂದ ಒಳಗಡೆ ಕರ್ಕೊಂಡು ಹೋದ್ರು.

ಮನೆ ಇನ್ನೂ ಹಾಗೆ ಇದೆ, ತುಂಬಾ ಹಳೆಮನೆ, ಅಜ್ಜಯ್ಯ ಸತ್ತಾಗ ನಾನು ಕೊನೆ ಸಲ ಬಂದಿದ್ದು.
ಮಾವ ಖುಷಿಯಿಂದ  “ಲೇ ಇವ್ಳೆ ಯಾರ್ ನೋಡು,” ಅಂತ ಅತ್ತೆನ ಒಳಗಡೆಯಿಂದ ಕರೆದ್ರು.
ಮನೆ ಬಿಟ್ಟು ಹೋದಾಗ ಮಾವನಿಗೆ ಮದ್ವೆ ಆಗಿರ್ಲಿಲ್ಲ, ಅಜ್ಜಯ್ಯನ ಜೊತೆ ಕೋಪಕ್ಕೆ ಊರು ಬಿಟ್ಟು ಹೋದವರು ಮನೆಯವರಿಗೂ ಹೇಳದೆ ಮದುವೆ ಆಗಿದ್ರು, ಹಾಗಾಗಿ ನನ್ನ ಮತ್ತು ನನ್ನ ಅತ್ತೆದು ಇದು ಮೊದಲನೆ ಭೇಟಿ. ಹೊರಗಡೆ ಜಗಲಿಯಲ್ಲಿ ಆಟ ಆಡ್ತಾ ಇದ್ದೋನು ಅವರ ದೊಡ್ಡ ಮಗ ವಿಘ್ನೇಶ, ಇನ್ನೊಬ್ಬ ಮಗ ಶ್ರೀಹರಿ ಇನ್ನೂ ಮೂರು ವರ್ಷದ ಮಗು. ನನ್ನ ಅತ್ತೆಯಂತು ಮಾತು ಕಮ್ಮಿ ಕೆಲಸ ಜಾಸ್ತಿ ಅನ್ನೊ ಗುಂಪಿಗೆ ಸೇರಿದೋರು. ಹಾಗಾಗಿ ನಾನು ಹೋದವನು ಮಾವನ ಜೊತೆನೆ ಇದ್ದೆ, ಪೂಜೆ ತಯಾರಿ ಅಂತ ತುಂಬಾನೆ ಓಡಾಡ್ತಾ ಇದ್ರು. ನಾನು ಅದು ಇದು ಅಂತ ಸಣ್ಣ ಪುಟ್ಟ ಕೆಲಸ ಮಾಡ್ತಾ ಅವರಿಗೆ ಸಹಾಯ ಮಾಡ್ತಾ ಇದ್ದೆ.

ಹಿಂದಿನ ದಿವಸ ಮನೆಯಲ್ಲಿ ಆಗಿದ್ದು ಅವರು ಮರ್ತೆ ಹೋಗಿದ್ರು ಅಂತ ಕಾಣ್ಸುತ್ತೆ, ನಾನಾಗಿ ಆ ವಿಷ್ಯನ ತೆಗೆಯೋದು ಅಷ್ಟು ಸರಿಯಲ್ಲ ಅನ್ನಿಸ್ತು. ಯಾಕಂದ್ರೆ ಇದು ಅವರ ಮನೆ ಇಲ್ಲಿ ಯಾರು ಬರಬೇಕು ಯಾರು ಬರಬಾರದು ಅನ್ನೋ ನಿರ್ಧಾರ ಅವರದು ಅದರಲ್ಲಿ ಮೂಗು ತೂರಿಸೊದಿಕ್ಕೆ ನಂಗೆ ಇಷ್ಟ ಇರ್ಲಿಲ್ಲ. ಆದರು ಅವರ ದ್ವಂದ್ವಕ್ಕೆ ಕಾರಣ ಏನು ಅಂತ ತಿಳ್ಕೋಳೊ ಕುತೂಹಲ ಮಾತ್ರ ಇತ್ತು.
ಇದ್ದಕ್ಕಿದ್ದ ಹಾಗೆ ಮಾವ

“ನಿನ್ನೆ ಸಂಜೆ ನಿನ್ ಜೊತೆ ಮಾತಾಡಿದ್ದು, ಮನೆಗೆ ಒಬ್ಬನೆ ಬಾ ಅಂತ ಹೇಳಿದ್ದು ಬೇಜರಾಯ್ತ?” ಅಂತ ನಿನ್ನೆ ವಿಷ್ಯಾನ ಅವರೆ ಶುರು ಮಾಡಿದ್ರು.

“ಬೇಜಾರು ಅಂತ ಅಲ್ಲ, ನಿಮ್ಮ ಬದಲಾದ ನಿರ್ಧಾರಗಳ ಹಿಂದಿನ ತರ್ಕ ನಂಗೆ ಅರ್ಥಾಅಗ್ಲಿಲ್ಲ ಅಷ್ಟೆ” ಅಂದೆ

“ನೀನ್ ಹೇಳಿದ ಕಾಶಿ ಭಟ್ರ ಬಗ್ಗೆ ನಿಂಗೇನು ಗೊತ್ತು?” ಅಂತ ಕೇಳಿದ್ರು.

“ಅದೆ…. ತುಂಬಾ ವರ್ಷ ಕಾಶಿಯಲ್ಲಿದ್ರು, ತುಂಬಾನೆ ಸಾಧು ಪ್ರಾಣಿ, ಅವ್ರು ಸತ್ತು ತುಂಬಾನೆ ವರ್ಷ ಆಗಿದೆ ಅಲ್ವ?” ಅಂತ ಕೇಳ್ದೆ

“ಅದೆಲ್ಲ ಸರಿನಪ್ಪ ಅವರ ಜಾತಿ, ಪದ್ದತಿ ಬಗ್ಗೆ ಗೊತ್ತ?” ಅಂದ್ರು

“ಬ್ರಾಹ್ಮಣ್ರೆ ಅಲ್ವ?” ಅಂತ ಹೇಳ್ದೆ, ನನ್ನ ಮುಖದಲ್ಲಿರೊ ಪ್ರಶ್ನಾರ್ಥಕ ಚಿನ್ಹೆ ಅವರಿಗೆ ಅರ್ಥ ಆಯ್ತು ಅಂತ ಕಾಣ್ಸುತ್ತೆ.

“ಜಾತಿಯಲ್ಲಿ ಬ್ರಾಹ್ಮಣರು ನಿಜ, ಆದ್ರೆ ಪದ್ದತಿ???”  ಅಂತ ಒಂದು ಕ್ಷಣ ಮಾತು ನಿಲ್ಲಿಸಿ ಮತ್ತೆ ಮುಂದುವರೆಸಿದರು


“ಅವರು ಶಿವ ಭಕ್ತರು, ಶಿವನ ಆರಾಧಕರು ಅನ್ನೋ ವಿಷಯ ನಿನಗೆ ಗೊತ್ತಿಲ್ವ?” ಅನ್ನೊ ವಿಚಿತ್ರ ಪ್ರಶ್ನೆ ಹೊರಬಂತು.

ನನಗೆ ಒಂದು ಕಡೆ ಆಶ್ಚರ್ಯಾನು ಆಯ್ತು, ಗೊಂದಲಾನು ಆಯ್ತು, ಅವರ ಶಿವ ಭಕ್ತಿಗು ಇವರ ಅಸಹನೆಗೂ ಎಲ್ಲಿಂದ ಎಲ್ಲಿಗೆ ಸಂಬಂಧ? ನಾನು ಏನೋ ಯೋಚನೆ ಮಾಡ್ತಾ ಬಂದರೆ ಇದೇನಿದು ಹೊಸ ಕಥೆ ಅಂತ ಅನ್ನಿಸ್ತ್.

“ಅಲ್ಲ ಮಾವ, ಅವರ ಪದ್ದತಿಗೂ ನಿಮ್ಮ ನಿರ್ಧಾರಗಳಿಗೂ ಏನು ಸಂಬಂಧ? ನನಗೆ ಒಂದೂ ಅರ್ಥ ಆಗ್ತಾ ಇಲ್ಲ” ಅಂದೆ

“ಸಂಬಂಧ ಇದೆ…. ಶಿವ ಭಕ್ತರಿಗೆ ಆ ಪಂಗಡದವರಿಗೆ ನನ್ನ ಮನೆಯಲ್ಲಿ ಜಾಗ ಇಲ್ಲ, ಅದರಲ್ಲೂ ಪೂಜೆ ಪುನಸ್ಕಾರ ಸಂಧರ್ಭದಲ್ಲಿ ಅವರ ಇರುವಿಕೆ ನಂಗೆ ಇಷ್ಟ ಆಗೊದಿಲ್ಲ” ಅಂತ ಸ್ವಲ್ಪ ಖಾರವಾಗಿ ಉತ್ತರಿಸಿದ್ರು.

“ನಿಮ್ಮನ್ನ ಪ್ರಶ್ನೆ ಮಾಡ್ತಾ ಇದಿನಿ ಅಂತ ತಪ್ಪು ತಿಳ್ಕೊಳ್ಬೇಡಿ,… ನಿಮ್ಮ ನಿರ್ಧಾರಕ್ಕೆ ಕಾರಣ ತಿಳ್ಕೊಳ್ಬೊದ?” ಅಂತ ಮೆಲ್ಲಗೆ ಪ್ರಶ್ನೆ ಮಾಡ್ದೆ.

“ನನ್ನ ನಿರ್ಧಾರ ಶ್ರೇಷ್ಠತೆಯ ಆಧಾರದ ಮೇಲೆ, ಆ ಜನಗಳು ಏನು ಮಾಡ್ತಾ ಇದ್ದಾರೆ ಅನ್ನೋದು ನಿನಗೆ ಗೊತ್ತಾ? ಶಿವನೆ ಸರ್ವ ಶಕ್ತ, ಅವನಿಂದಲೆ ಈ ಜಗತ್ತು ಅಂತ ಸಮಾಜದ ದಾರಿ ತಪ್ಪಿಸ್ಥ ಇದ್ದಾರೆ, ಈ ಜಗತ್ತಿನಲ್ಲಿ ಮಹಾ ವಿಷ್ಣು, ಶ್ರೀಮನ್ ನಾರಾಯಣನೇ ಸರ್ವ ಶ್ರೇಷ್ಠ ಅಂತ ವೇದೊಪನಿಷತ್ತುಗಳೇ ಸಾರಿ ಹೇಳ್ತಾ ಇರೋವಾಗ ಅದು ಹೇಗೆ ಶಿವ ಸರ್ವ ಶಕ್ತನಾಗ್ತಾನೆ.”  ಅನ್ನೊ ವಾದ ಮಂಡಿಸಿದ್ರು.

ನಾನು ಒಂದು ಕ್ಷಣ ಅವಾಕ್ಕಾದೆ ನಾನು ನಿಂತಿರೊ, ನೆಲ, ಕಾಲ, ನಂಬಿಕೆ ಎಲ್ಲವನ್ನ ಪ್ರಶ್ನೆ ಮಾಡಿಕೊಂಡೆ, ಈ ವಿಷಯವಾಗಿ, ಇವರು ಏನನ್ನ ಪ್ರತಿಪಾದಿಸೊದಿಕ್ಕೆ ಹೊರಟಿದ್ದಾರೆ ಅಂತ ಯೋಚನೆ ಮಾಡೊಕೆ ಶುರುಮಾಡಿದೆ, ಅವರ ಮಾತುಗಳಿಗೆ ಅರ್ಥಗಳೇನು ಅಂತ ಯೋಚಿಸಿದೆ? ಜಾತಿ ಪದ್ದತೀನೇ ಇರಬಾರದು ಅಂತ ಹೋರಾಟಕ್ಕೆ ನಿಂತಿರೋ ಈ ಸಮಾಜದಲ್ಲಿ, ಶಿವ ಭಕ್ತಿ, ಹರಿ ಭಕ್ತಿ ಅಂತ ಜಗಳ ಮಾಡೊ ಮನಸ್ಥಿತಿ ಇನ್ನೂ ಇದೆಯ ಅಂತ ಆಶ್ಚರ್ಯ ಆಯ್ತು. ಚರ್ಚೆಗೆ ಸಿದ್ದವಾಗಿದ್ದ ಅವರ ಮಾತುಗಳನ್ನ ಕೇಳಿ ನನಗೂ ಮಾತು ಬೆಳೆಸೊ ಧೈರ್ಯ ಬಂತು.
“ಯಾವುದನ್ನ ಶ್ರೇಷ್ಟ ಅಂತ ಹೇಳ್ತಾ ಇದಿರ? ಯಾವ ಆಧಾರ ಮೇಲೆ ಶ್ರೇಷ್ಟತೆಯನ್ನ ನಿರ್ಧಾರ ಮಾಡಿದಿರ?” ಅಂದೆ
ನನ್ನ ಪ್ರಶ್ನೆಯಿಂದ ಸ್ವಲ್ಪ ವಿಚಲಿತರಾದಂತೆ ಕಂಡುಬಂದರೂ ಅದನ್ನ ತೋರಿಸಿ ಕೊಳ್ಳದೆ “ಒಂದು ನಿಮಿಷ” ಸೀದ ದೇವರ ಮನೆಯೊಳಗೆ ನಡೆದರು. ಕೈಯಲ್ಲಿ ಯಾವುದೋ ತಾಳೆಗರಿ ಗ್ರಂಥ ‘ಶ್ರೀವಿಷ್ಣು ಸಹಸ್ರನಾಮ’ ಅದನ್ನ ನನ್ನ ಕೈಗಿರಿಸಿ ಮಾತು ಮುಂದುವರೆಸಿದರು

‘’ಸ್ತೊತ್ರಗಳ ವಿಚಾರಕ್ಕೆ ಬಂದರೆ, ನಮ್ಮ ಪೂರ್ವಿಕರ ಪ್ರಕಾರ ಈ ಪ್ರಪಂಚದಲ್ಲಿ ವಿಷ್ಣುವಿನ ಸಾವಿರ ನಾಮಗಳ ಈ ಸ್ತೊತ್ರಕ್ಕೆ ಯಾವಾಗಲೂ ಮೊದಲನೇ ಸ್ಥಾನ, ಇದರ ಬಗ್ಗೆ ಗೊತ್ತಾ ನಿನಗೆ?” ಅಂತ ಹೇಳ್ತ ಮಾತು ಮುಂದುವರೆಸಿದ್ರು.
 ಮಹಾಭಾರತದ ಅನುಶಾಸನ ಪರ್ವದಲ್ಲಿ ಭೀಷ್ಮ ಮರಣ ಶಯ್ಯೆಯಲ್ಲಿ ಮಲಗಿರುತ್ತಾನೆ, ಯುದ್ದ ವಿಜಯಿ ಧರ್ಮರಾಯ ಭೀಷ್ಮನ ಬಳಿ ಬಂದು ಯುದ್ಧದಲ್ಲಿ ನಡೆದ ಪ್ರಾಣ ಹಾನಿ, ಯುದ್ದದಿಂದಾ ಸಾವು ನೋವುಗಳ ಬಗ್ಗೆ ಅವನಲ್ಲಿದ್ದ ಪಾಪ ಪ್ರಜ್ಞೆಯ ಬಗ್ಗೆ ತಿಳಿಸುತ್ತಾನೆ. ಭೀಷ್ಮಾಚಾರ್ಯರನ್ನ ಕುರಿತು

ಕಿಮೇಕಂ ದೈವತಂ ಲೋಕೆ ಕಿಂ ವಾಪ್ಯೇಕಂ ಪರಾಯಣಂ

ಸ್ತುವಂತಃ ಕಂ ಕಮರ್ಚಂತಃ ಪ್ರಾಪ್ನುಯುರ್ಮಾನವಾಃ ಶುಭಂ

 ಕೋ ಧರ್ಮ ಸರ್ವ ಧರ್ಮಾಣಾಂ ಭವತಃ ಪರಮೋ ಮತಃ

ಕಿಂ ಜಪನ್ಮುಚ್ಯತೇ ಜಂತುರ್ಜನ್ಮಸಂಸಾರ ಬಂಧನಾತ್

 ಅದಕ್ಕೆ ಭೀಷ್ಮಾಚಾರ್ಯರು

ಜಗತ್ಪ್ರಭುಂ ದೇವದೇವಮನಂತಂ ಪುರುಷೊತ್ತಮಂ

ಸ್ತುವನ್ನಾಮಸಹಸ್ರೇಣ ಪುರುಷಃ ಸತತೋಸ್ಥಿತಃ


 ತಮೇವ ಚಾರ್ಚಯನ್ನಿತ್ಯಂ ಭಕ್ತ್ಯಾ ಪುರುಷಮವ್ಯಯಮ್

ಧ್ಯಾಯನ್ ಸ್ತುವನ್ನಮಸ್ಯಂಶ್ಚ ಯಜಮಾನಸ್ತಮೇವಚ


 ಅನಾಧಿ ನಿಧನಂ ವಿಷ್ಣುಂ ಸರ್ವ ಲೋಕ ಮಹೇಶ್ವರಂ

ಲೋಕಾಧ್ಯಕ್ಷಂ ಸ್ತುವನ್ನಿತ್ಯಮ್ ಸರ್ವದುಃಖಾತಿಗೋ ಭವೇತ್


 ಬ್ರಹ್ಮಣ್ಯಂ ಸರ್ವಧರ್ಮಜ್ಞಂ ಲೋಕಾನಂ ಕೀರ್ತಿವರ್ಧನಂ

ಲೋಕನಾಥಂ ಮಹದ್ಭೂತಂ ಸರ್ವಭೂತಭವೋಧ್ಭವಂ


ಅಂದರೆ ಈ ಶ್ಲೋಕಗಳ ಭಾವರ್ಥ

 ‘’ಈ ಲೋಕದಲ್ಲಿ ನಾನು ಯಾರನ್ನ ಸ್ಮರಿಸ ಬೇಕು? ಯಾವ ದೇವರ ಪಾರಾಯಣದಿಂದ, ಯಾರ ಅರ್ಚನೆಯಿಂದ ಶುಭವಾಗುತ್ತದ್ದೆ? ಧರ್ಮಗಳಲ್ಲಿ ಎಲ್ಲಕ್ಕಿಂತ ಮಿಗಿಲಾದ ಧರ್ಮ ಯಾವುದು? ಯಾರನ್ನ ಜಪಿಸುವುದರಿಂದ ಈ ಜನ್ಮ, ಸಂಸಾರ, ಬಂಧನಗಳಿಂದ ಮುಕ್ತಿ ಹೊಂದಬಹುದು’’ ಎಂದು ಯುಧಿಷ್ಟಿರ ಪ್ರಶ್ನಿಸಿದಾಗ

 ಭೀಷ್ಮಾಚಾರ್ಯರು, ಮಹಾನ್ ವಿಷ್ಣುವಿನ ಕುರಿತಾಗಿ

 “ಜಗತ್ಪ್ರಭುವಾದ, ದೇವರಲ್ಲಿ ದೇವನಾದ ಅವನನ್ನು ಸಹಸ್ರ ನಾಮಗಳಿಂದ ಸ್ಮರಿಸಬೇಕು. ಅವನನ್ನೆ ಅರ್ಚಿಸ ಬೇಕು, ಭಕ್ತಿಯಿಂದ ಅವನನ್ನು ಧ್ಯಾನಿಸ ಬೇಕು, ವಿಷ್ಣುವು ಈ ಲೋಕದ ಓಡೆಯ, ಈ ಲೋಕದ ಅಧ್ಯಕ್ಷ, ಅವನನ್ನ ಸ್ತುತಿಸುವುದರಿಂದ ಎಲ್ಲಾ ದುಃಖಗಳು ದೂರವಾಗುವುವು, ಎಲ್ಲಾ ಧರ್ಮವನ್ನು ಬಲ್ಲವನು, ನಮ್ಮ ಲೋಕನಾಥ ಆ ಭಗವಂತ”.

 ಇನ್ನೂ ಹೆಚ್ಚಾಗಿ ಹೇಳುವುದಾದರೆ

ಯತಃ ಸರ್ವಾಣಿ ಭೂತಾನಿ ಭವಂತ್ಯಾದಿಯುಗಾಗಮೇ

ಯಸ್ಮಿಂಶ್ಚ ಪ್ರಲಯಂ ಯಾಂತಿ ಪುನರೇವಾ ಯುಗಕ್ಷಯೇ

ಅಂದರೆ ಸೃಷ್ಟಿಯ ಆದಿಯಲ್ಲಿ ಆ ಭಗವಂತನಿಂದ ನಮ್ಮ ಕಣ್ಣಿಗೆ ಕಾಣುವ ಜೀವಿಗಳ, ಈ ಲೋಕದ ಸೃಷ್ಟಿಯಾಗುತ್ತದೆ. ಈ ಯುಗದ ಅಂತ್ಯದಲ್ಲಿ ತಮ್ಮ ಬಾಹ್ಯ ರೂಪವನ್ನ ಕಳೆದುಕೊಂಡು ಸೂಕ್ಷ್ಮ ರೀತಿಯಲ್ಲಿ ಮತ್ತೆ ಆ ಭಗವಂತನನ್ನು ಸೇರುತ್ತವೆ ಎಂಬುದು ಇದರ ಭಾವಾರ್ಥ.

 ಹಾಗಾಗಿ ನಾನು ಹೇಳೋದು ಈ ಸೃಷ್ಟಿಗೆ ಕಾರಣನಾದವನ ಬಗ್ಗೆ, ನಮ್ಮನ್ನ ಸಲಹುವವನು ಅವನು, ನಮ್ಮ ಸ್ಥಿತಿಗೆ ಕಾರಣನೇ ಆ ಮಹಾವಿಷ್ಣು, ಸರ್ವ ಶಕ್ತನಾದ ಆ ಭಗವಂತನನ್ನು ಸ್ಮರಿಸುವುದೇ ಶ್ರೇಷ್ಟವಾದ ಕೆಲಸ, ಎಲ್ಲರಿಗಿಂತ ಅವನೇ ಶ್ರೇಷ್ಟ.” ಅಂತ ತಮ್ಮ ದೀರ್ಘವಾದ ವಾದವನ್ನ ಮುಗಿಸಿದರು.


ಈ ರೀತಿ ಮಹಾಭಾರತದ ಶ್ಲೋಕ, ಸಹಸ್ರನಾಮ ಅನ್ನೊ ಮಾತುಗಳನ್ನ ಅಡ್ತಾ ಹೋದಾ ಅದನ್ನ ಎದುರಿಸಿ ನಿಲ್ಲೊ ತಾಕತ್ತು ನನಗಿರಲಿಲ್ಲ???? ಹಳಿ ತಪ್ಪಿದಂತೆ ಕಾಣುವ ಇವರ ವಾದಕೆ ಪ್ರತಿವಾದ ಮಾಡಲು ಈಗ ನನ್ನ ಹತ್ರ ಯಾವ ಶ್ಲೋಕಗಳೂ ಇರಲಿಲ್ಲ ಯಾವ, ಭಾವಾರ್ಥಗಳೂ ಇರಲಿಲ್ಲ. ಇಬ್ಬರು ಸ್ವಲ್ಪ ಹೊತ್ತು ಮೌನವಾಗಿದ್ದೆವು. ಅವರ ಭಾವಾವೇಷ ಕಮ್ಮಿ ಆಯ್ತು ಅಂತ ಕಾಣುತ್ತೆ. ಮತ್ತೆ ಶಾಂತ ಧ್ವನಿಯಲ್ಲಿ ಮಾತು ಶುರು ಮಾಡಿದರು.

“ವಿಶ್ವ……ಯಾರು ಶ್ರೇಷ್ಟ ಅನ್ನೊ ನನ್ನ ನಿರ್ಧಾರದಲ್ಲಿ ನಿನಗೆ ಸಂಶಯ ಇತ್ತು, ಅದನ್ನ ಪರಿಹರಿಸೊ ಸಲುವಾಗಿ ಇಷ್ಟೆಲ್ಲ ವಿವರಣೆಯನ್ನ ನಿಂಗೆ ಕೊಡ ಬೇಕಾಯ್ತು, ನಿನ್ನ ಸಂಶಯ ಎಷ್ಟು ಪರಿಹಾರವಾಗಿದೆ ಅನ್ನೊದು ನನ್ನಗೆ ಗೊತ್ತಿಲ್ಲ. ಅದೂ ಅಲ್ಲದೆ ಇನ್ನೊಂದು ವಿಷಯ, ಶಿವ ಭಕ್ತರ ಬಗ್ಗೆ ನನ್ನ ವಿರೋಧಕ್ಕೆ ಇನ್ನೊಂದು ಮುಖ್ಯವಾದ ಕಾರಣ ಇದೆ ಅದೇನಂದ್ರೆ ಅವರು ಮಡಿ ಕೆಲಸಕ್ಕೆ ಲಾಯಕ್ಕಲ್ಲದ ಜನಗಳು ಅನ್ನೋದು,…..ನೀನೆ ಯೋಚನೆ, ಆ ಶಿವನೇ ಸ್ಮಶಾನವಾಸಿ, ಮೈಯೆಲ್ಲ ಬೂದಿ ಮೆತ್ತಿಕೋಂಡಿರೋನು ಇನ್ನು ಅವನ ಆರಾಧಕರು ಬಾಹ್ಯವಾಗಿಯು ಮಾನಸಿಕವಾಗಿಯು ಎಷ್ಟು ನಿರ್ಮಲರು ಅಂತ ನೀನೆ ಯೋಚನೆ ಮಾಡು? ಸಂಹಾರವೇ ಅವನ ಕೆಲಸ ಅಂದ ಮೇಲೆ ಜಗದ್ರಕ್ಷಕ ಹೇಗಾಗ್ತೀನೆ?” ನನ್ನ ಮುಖವನ್ನ ನೀಡಿ ಮತ್ತೆ ಮಾತು ಮುಂದುವರೆಸಿದ್ರು.

“ನನ್ನ ಅಜ್ಜ, ಅಂದ್ರೆ ನಿನ್ನ ಮುತ್ತಜ್ಜ ನರಸಿಂಗ ಭಟ್ಟರು, ಮಹಾನ್ ವಿಷ್ಣು ಭಕ್ತರು, ಸಂಸ್ಕೃತ ಪಂಡಿತರು ಈ ವಿಷ್ಣುಸಹಸ್ರನಾಮಕ್ಕೆ ಸಂಸ್ಕೃತದಲ್ಲಿ ತಮ್ಮದೇ ಆದ ವ್ಯಾಖ್ಯಾನ ಬರೆದವರು, ನಿನಗೆ ಗೊತ್ತ ನನ್ನ ತಂದೆ ತಾಯಿಯ ಮಡಿಲಿಗಿಂತ ನಾನು ನನ್ನ ಅಜ್ಜನ ಮಡಿಲಲ್ಲಿ ಬೆಳೆದಿದ್ದೆ ಜಾಸ್ತಿ.”

ಹಳೆಯ ತಾಳೆಗರಿಯ ಗ್ರಂಥವನ್ನ ನನ್ನ ಕೈಗಿಟ್ಟು  ” ತೆಗೊ, ಇದು ನನ್ನ ಅಜ್ಜ ತಮ್ಮ ಕೈಯ್ಯಾರೆ ಬರೆದಿರುವ ವ್ಯಾಖ್ಯಾನ ಗ್ರಂಥ, ಅವರಿಗೂ ಕೂಡ ಶಿವ ಭಕ್ತರು ಮಡಿಗೆ ಯೊಗ್ಯವಲ್ಲ ಅನ್ನೊ ನಂಬಿಕೆ ಇತ್ತು, ಅದನ್ನೆ ನಾನು ಇವತ್ತಿಗೂ ನಂಬಿದ್ದೇನೆ, ಇವತ್ತಿಗೂ ಪ್ರತಿಪಾದನೆ ಮಾಡ್ತಾ ಇದ್ದೇನೆ” ಅಂದ್ರು.

ಅವರ ಮಾತುಗಳಲ್ಲೆ ಅರ್ಥ ಆಗ್ತಾ ಇತ್ತು ಅವರಲ್ಲಿ ಹಳೆಯ ನಂಬಿಕೆಗಳು ಎಷ್ಟು ಬಲವಾಗಿ ಬೇರೂರಿದ್ದವು ಅಂತ. ಅದನ್ನ ವಿರೋಧಿಸೊ ಇಚ್ಚೆ ಇದ್ದರು ಅದು ನನ್ನಿಂದ ಸಾಧ್ಯವಿಲ್ಲ ಅನ್ನಿಸ್ತು.

“ಕಾಲ ಬದಲಾಗ್ತಾ ಇದ್ದ ಹಾಗೆ ನಮ್ಮ ತತ್ವ, ನಂಬಿಕೆಗಳ ಅರ್ಥಗಳೂ ಬದಲಾಗಬೇಕು ಅಲ್ವ ಮಾವ?” ಅಂದೆ

ನನ್ನ ಈ ಅಚಾನಕ್ ಪ್ರಶ್ನೆಯಿಂದ ಅವರ ಮುಖದಲ್ಲಿ ಮತ್ತೆ ಗಂಭೀರತೆ ತುಂಬಿಕೊಳ್ತು, ಮತ್ತೆ ನಾನು ಮುಂದುವರೆಸುತ್ತ

“ಅಂದ್ರೆ, ನಾನು ಹೇಳೊದು ಮಹಾಭಾರತ, ರಾಮಾಯಣ, ವೇದ ಉಪನಿಷತ್ ಗಳು ನಿತ್ಯ ಪ್ರಸ್ತುತ, ಅದು ಈಗಿನ ಕಾಲಕ್ಕೆ ಹೇಗೆ ಅನ್ವಯಿಸುತ್ತೆ ಅಂತ ಅರ್ಥ ಮಾಡ್ಕೊಳೊದು ಮುಖ್ಯವಾಗುತ್ತೆ ಅಲ್ವ” ಅಂತ ನನ್ನ ಪ್ರಶ್ನೆನ ಸ್ಪಷ್ಟ ಪಡಿಸೋಕೆ ಹೊರಟೆ.

“ಅಂದರೆ ನಿನ್ನ ಮಾತಿನ ಅರ್ಥ, ನಾನು ನನ್ನ ಅಜ್ಜ ಮಹಾಭಾರತವನ್ನ, ವೇದಗಳನ್ನ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಅನ್ನೊದು?
ಸರಿ ಹಾಗಿದ್ರೆ ನೀನು ಕಾಲೇಜು ಓದಿದವನು, ಪ್ರಸ್ತುತ ಸಮಾಜದ ನಂಬಿಕೆಗಳ ಬಗ್ಗೆ ಅರಿವು ಇರುವವನು, ನನ್ನ ಈ ನಂಬಿಕೆಯ ವಿಷಯದಿಂದಾಗಿ ನನ್ನ ಜೀವನದಲ್ಲಿ ಅದೆಷ್ಟೊ ಜಗಳಗಳು ನಡೆದು ಹೋಗಿದೆ, ನಾನು ತಪ್ಪಿತಸ್ಥ ಅನ್ನೊದೆ ಇಲ್ಲಿಯವರೆಗೂ ಉಳಿದು ಹೋಗಿದೆ, ನಾನು ಹೇಗೆ ತಪ್ಪು ಅನ್ನೊದು ನೀನು ನನಗೆ ತಿಳಿಸೋಕೆ ಸಾಧ್ಯವಾದ್ರೆ ತಿಳಿಸು, ಒಬ್ಬ ಒಳ್ಳೆ ವಿದ್ಯಾರ್ಥಿಥರ ನಿನ್ನ ಮಾತುಗಳ ಬಗ್ಗೆ ಆಲೋಚನೆ ಮಾಡ್ತೀನಿ?”   ಅಂತ ಸವಾಲಿನ ರೀತಿಯಲ್ಲಿ ನನ್ನ ಕೇಳಿದ್ರು.

ಅಭಿಪ್ರಾಯವನ್ನ ಕೇಳದೆ ನಿರ್ಧಾರ ಹೇಳೊದು ಕೇಶವ ಮಾವನ ಸಹಜ ಗುಣ ಅನ್ನೋದು ನನಗೆ ಈಗ ಸ್ಪಷ್ಟ ಆಯ್ತು. ಅವರ ಯೋಚನೆ ದಿಢೀರ್ ನಿರ್ಧಾರಗಳು ನನ್ನನ್ನ ಇಕ್ಕಟ್ಟಿಗೆ ಸಿಲುಕಿಸ್ತು. ಅವರ ಮಾತಿಗೆ ಏನು ಉತರ ಕೊಡದೆ ಮುತ್ತಜ್ಜನ ಹಳೆಯ ಗ್ರಂಥವನ್ನ ಹಿಡ್ಕೊಂದು ಅಲ್ಲಿಂದ ಹೊರಬಿದ್ದೆ.

ಇರುವುದೆಲ್ಲವ ಬಿಟ್ಟು, ಇರುವೆ ಬಿಟ್ಟುಕೋಳ್ಳುವುದೇ ಜೀವನ ಅಂತ ನನ್ನ ಸ್ನೇಹಿತ ಹೇಳ್ತ ಇದ್ದ. ಹಾಗಂದ್ರೆ ಇದೆ ಇರ್ಬೇಕು ಅಂತ ಯೋಚನೆ ಮಾಡ್ತ ಮನೆ ದಾರಿ ಹಿಡಿದೆ.

ಈ ಜಡಿ ಮಳೆಗೆ ಕರೆಂಟ್ ಕೂಡ ಸರಿಯಾಗಿ ಇರೊಲ್ಲ, ಸಂಜೆ 5 ಗಂಟೆ ಆಗಿದ್ರೂ ಮೋಡ ತುಂಬಿಕೊಂಡು ಆಗಲೆ 7 ಗಂಟೆ ಥರ ಕತ್ತಲಾಗಿತ್ತು. ಮನೆಗೆ ಬಂದವನು ಕೂಡ ಮಾವನ ಬಗ್ಗೆನೆ ಯೊಚ್ನೆ ಮಾಡ್ತಾ ಇದ್ದೆ. ಇಷ್ಟು ದಿವಸ ನಾನು ಅಂದುಕೊಂಡಿದ್ದಕ್ಕು, ಅವರು ಇರೊದಿಕ್ಕು, ತುಂಬಾನೆ ವ್ಯತ್ಯಾಸ ಇತ್ತು. ತುಂಬ ನಿಗೂಢ ಮನುಷ್ಯ ಅನ್ನಿಸ್ತು. ಅವರ ನಂಬಿಕೆ, ಅದನ್ನ ಸಾಧಿಸೋಕೆ ನಿಂತಾಗ ಅವರಲ್ಲಿದ್ದ ಭಾವಾವೇಶ,

ಹೀಗೆಲ್ಲ ಯೊಚನೆ ಮಾಡ್ತಾ ಇದ್ದಾಗ ಕಾಫಿ ಹಿಡ್ಕೊಂಡು ಅಮ್ಮ ಅಲ್ಲಿಗೆ ಬಂದ್ರು

“ಏನೊ ಮಾವನ ಮನೆಯಲ್ಲಿ ಏನ್ ವಿಶೇಷ, ಅತ್ತೆ ಏನ್ ಸ್ಪೆಶಲ್ ಮಾಡಿದ್ರು ಅವರ ಅಳಿಯನಿಗೆ” ಅಂತ ಕೇಳಿದ್ರು.

ಪಕ್ಕದಲ್ಲೆ ನನ್ನ ಮುತ್ತಜ್ಜನ ತಾಳೆಗರಿಯನ್ನ ನೋಡಿ

“ಅರೆ ಇದು ಇಲ್ಲಿ ಹೇಗೆ ಬಂತು?” ಅಂತ ಆಶ್ಚರ್ಯದಿಂದ ಕೇಳಿದ್ರು.

“ಅದು ಮಾವನ ಮನೆಯಿಂದ ತಂದಿದ್ದು,” ಅಂತ ಹೇಳಿದೆ

“ಅಣ್ಣನಿಗೆ ಗೊತ್ತಾಗದ ಹಾಗೆ ತಂದ್ಯ ಇಲ್ಲ….???”  ಮತ್ತೆ ಪ್ರಶ್ನೆ

“ಅವರೆ ಕೊಟ್ಟು ಕಳಿಸಿದ್ದು, ಗೊತ್ತಾಗದೆ ಇರೊ ಹಾಗೆ ತರೋದು ಅಂದ್ರೆ ಏನ್ ಅರ್ಥ?” ಅಂತ ಸ್ವಲ್ಪ ಸಿಟ್ಟಲ್ಲೆ ಕೇಳಿದೆ

“ಇದು ನಮ್ ಅಜ್ಜ ಬರೆದಿರೊ ಪುಸ್ತಕ, ಅಣ್ಣನಿಗೆ ಅಜ್ಜ ಅಂದ್ರೆ ತುಂಬ ಇಷ್ಟ, ಅವನ ಅಪ್ಪ ಅಮ್ಮನ ಜೊತೆ ಇದ್ದಿದ್ದಕಿಂತ ಜಾಸ್ತಿ, ಅವನು ತಾತನ ಜೊತೆ ಇದ್ದಿದ್ದೆ ಹೆಚ್ಚು, ಅವರಿಗೂ ಅವನಂದ್ರೆ ಪ್ರಾಣ, ಅವನಿಗೆ ಮಂತ್ರ ಹೇಳಿ ಕೊಡೊದು, ವೇದ ಪಾಠವನ್ನ ಹೇಳಿ ಕೊಡೋದು ಎಲ್ಲ ಮಾಡ್ತಾ ಇದ್ರು, ಒಂದು ದಿವಸ ಇವನ ಮಡಿಲಲ್ಲಿ ತಲೆ ಇಟ್ಟು ಅವನ ಮಾಡ್ತಾ ಇದ್ದ ಪಾರಾಯಣ ಕೇಳ್ತಾ ಇದ್ದೋರು ಹಾಗೆ ಪ್ರಾಣ ಬಿಟ್ಟಿದ್ರು, ಅದಾದ ಮೇಲೆ ಅವನಿಗೆ ಏನಾದ್ರು ತುಂಬಾ ಸಿಟ್ಟು ಬಂದಾಗ, ತುಂಬಾ ದುಃಖ ಆದಾಗ ನದಿ ಪಕ್ಕದಲ್ಲಿ ಒಬ್ಬನೆ ಈ ಸಹಸ್ರನಾಮ ಪಾರಯಣ ಮಾಡ್ತಾ ಇದ್ದ, ಇದನ್ನ ಯಾರಿಗು ಮುಟ್ಟೊಕೆ ಬಿಡ್ತಾ ಇರ್ಲಿಲ್ಲ.” ಅಂತ ಮಾತು ಮುಗಿಸಿದ್ರು.

ಮಾವನ ವಿಷಯ ಕೆದಕುತ್ತಾ ಹೋದ ಹಾಗೆ, ಕುತೂಹಲ ಇನ್ನೂ ಜಾಸ್ತಿಯಾಯ್ತು.

“ಅಮ್ಮ ನಿನ್ ಅಜ್ಜ, ಅಂದ್ರೆ ನನ್ನ ಮುತ್ತಜ್ಜ, ಅದೇ ಮನೆಯಲ್ಲಿ ಇದ್ದಿದ್ದ?” ಅಂದೆ

“ನಿನ್ ಮುತ್ತಜ್ಜ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಪೂಜೆ ಮಾಡಿಕೊಂಡಿದ್ದವರು, ಅಲ್ಲೆ ಪಕ್ಕದಲ್ಲಿ ಒಂದು ಗುಡಿಸಲಿಲಲ್ಲಿ ಒಬ್ಬರೆ ಇದ್ರು, ಬಹಳ ಹಿಂದಿನ ವಿಚಿತ್ರವಾದ ಪದ್ದತಿ ಅದು, ಅಲ್ಲಿ ಪೂಜೆ ಮಾಡೊರು ಕನಿಷ್ಟ 12 ವರ್ಷ ಅಲ್ಲಿ ಪೂಜೆ ಮಾಡ್ಬೇಕು, ಅರ್ಚಕರಾಗಿ ಕೆಲಸ ಮಾಡ್ತಾ ಇದ್ದ ಅವಧಿಯ ಅಷ್ಟೂ ವರ್ಷದವರೆಗೆ ಅವರು ಅವರ ಹೆಂಡತಿ ಮಕ್ಕಳು ಇರೋ ಮನೆಗೆ ಹೋಗೊ ಹಾಗಿರ್ಲಿಲ್ಲ, ಮಗನಾಗಿ ನಡೆಸ ಬೇಕಾದ ಪಿತೃಕಾರ್ಯ ನಡೆಸಲು ಇದ್ದ ವಿನಾಯಿತಿ ಬಿಟ್ಟರೆ ಅವರಿಗೂ, ಅವರ ಕುಟುಂಬಕ್ಕೂ ಸಂಪರ್ಕಾನೆ ಇರ್ತಿರ್ಲಿಲ್ಲ, ಗಂಡು ಮಕ್ಕಳು ಮಾತ್ರ ಆದೂ ದೇವಸ್ಥಾನದಲ್ಲಿ ಭೇಟಿ ಆಗಬಹುದಿತ್ತು. ಅವರ ಹೆಂಡತಿ ಅಂದರೆ ನನ್ನ ಅಜ್ಜಿ, ಬಹಳ ಬೇಗ ತೀರಿ ಕೊಂಡಿದ್ರಂತೆ, ಹಾಗಾಗಿ ಅಜ್ಜ ಅವರ ಬಹುಪಾಲು ಜೀವನವನ್ನ ಒಂಟಿಯಾಗೆ ಕಳೆದಿದ್ರು, ಅವರು ಸಾಯೋವರುಗು ಗಟ್ಟಿ ಮುಟ್ಟಾಗೆ ಇದ್ರು, ಸಾಯೊ ಕೊನೆಯ ದಿನದವರೆಗು ಅವರೆ ದೇವಸ್ಥಾನದ ಪೂಜೆಯನ್ನ ಮಾಡ್ತಾ ಇದ್ರು. ಮಹಾನ್ ವಿಷ್ಣು ಭಕ್ತರು.”

ನಾನು ನಡುವೆ ಬಾಯಿಹಾಕಿ “ತಮ್ಮ ಮಕ್ಕಳ ಭೇಟಿಗೂ ಅಷ್ಟೊಂದು ನಿಷೇಧ ಇತ್ತು ಅಂದ್ರೆ, ಮತ್ತೆ ಮಾವ ಅವರ ಜೊತೆ ಹೆಚ್ಚು ಇದ್ದಿದ್ದು ಅಂದ್ರೆ ಹೇಗೆ?” ಅಂದೆ

“ಹೌದು, ಮಾವನಿಗೆ ವೇದ ಮಂತ್ರಗಳಲ್ಲಿ ಇದ್ದ ಅತೀವ ಆಸಕ್ತಿಯಿಂದ, ನಿಯಮ ಮೀರಿ ಅವನನ್ನ ಅವರ ಜೊತೆ ಇರಿಸಿ ಕೋಳ್ತಾ ಇದ್ರು, ನಿನ್ನ ಮಾವ ಅವರಿಂದ ತುಂಬಾ ಪ್ರಭಾವಿತನಾಗಿದ್ದ, ಅವರ ನಂತರ ಅವನೇ ಆ ದೇವಾಲಯದ ಪೂಜೆಯನ್ನ ಮುಂದುವರೆಸ ಬೇಕು ಅಂತ ಅವರಿಗೆ ತುಂಬಾನೆ ಆಸೆ ಇತ್ತು. ಅವರು ಸತ್ತು ಹೋದ ನಂತರ ಆಗಿದ್ದೇ ಬೇರೆ, ಅಲ್ಲಿ ಕುಗ್ಗಿ ಹೋದ ನಮ ಅಣ್ಣ ಇಲ್ಲಿವರೆಗು, ಅದೇ ನೋವಲ್ಲಿ ಕೊರಗುತ್ತಾಇದ್ದಾನೆ”

“ಅಂತದ್ದು ಏನಾಯ್ತು?, ಈಗಲೂ ಅನುಭವಿಸ್ತಾ ಇದಾರೆ ಅಂದ್ರೆ ಹೇಗೆ?” ಅಂತ ಮತ್ತೆ ಪ್ರಶ್ನೆ ಮಾಡಿದೆ.

“ಅವನಿಗಾದ ಅನ್ಯಾಯ, ಅವನ ಹಠಮಾರಿತನ, ಅವನು ಮನೆ ಬಿಟ್ಟು ಹೋಗಿದ್ದು, ಅವನು ಈಗಿರೊ ಪರಿಸ್ಥಿತಿ ಒಟ್ಟಿನಲ್ಲಿ ಅವನ ಪಾಲಿನ ಕೆಟ್ಟ ದಿನಗಳು ಶುರುವಾಗಿದ್ದೇ ಅವನ ಅಜ್ಜ ಸತ್ತ ದಿನದಿಂದ”

ಅಮ್ಮನ ಮಾತುಗಳು ಮಾನವ ಹಿಂದಿನ ಹೊಸ ಇತಿಹಾಸ ತೆರೆದುಕೊಳ್ತಾ ಬಂತು

“ನನ್ನ ಅಜ್ಜ, ಅಂದ್ರೆ ನಿನ್ನ ಮತ್ತಜ್ಜ ಅವರಿಗೆ ಎರಡು ಜನ ಗಂಡು ಮಕ್ಕಳು, ಒಬ್ಬರು ನನ್ನ ದೊಡ್ಡಪ್ಪ ಮಾಧವ ಮೂರ್ತಿಗಳು, ಇನ್ನೊಬ್ಬರು ನನ್ನ ಅಪ್ಪ ಶ್ರೀನಿವಾಸ ಮೂರ್ತಿಗಳು. ವಿಷ್ಣುಮೂರ್ತಿ ದೇವಸ್ಥಾನದ ಪೂಜೆಯ ಹಕ್ಕು ನಮ್ಮ ವಂಶಕ್ಕೆ, ಎಷ್ಟೊ ವರ್ಷಗಳ ಹಿಂದೆ ಈ ಪ್ರದೇಶವನ್ನ ಆಳುತ್ತಾ ಇದ್ದ ಫಾಲ್ಗುಣ ರಾಜ ವಂಶದ ದೊರೆಗಳಿಂದ ದೊರಕಿದ್ದು, ಪೂಜೆಯ ಹಕ್ಕಿನ ಬಗ್ಗೆ ನಮ್ಮ ವಂಶಜರ ಹೆಸರು ಮತ್ತು ರಾಜಮುದ್ರಿಕೆ ಇರೊಒಂದು ಹಳೆಯ ತಾಮ್ರದ ಹಾಳೆ ಈಗಲು ದೇವಸ್ಥಾನದಲ್ಲಿ ಇದೆ.
ಅವತ್ತು ಹಟಾತ್ ಆಗಿ ನಮ್ಮ ಅಜ್ಜ ಸತ್ತು ಹೋಗಿದ್ರಿಂದ ಮುಂದಿನ ಪೂಜೆಯ ಜವಾಬ್ದಾರಿಯ ವಿಷಯದಲ್ಲಿ ಸಮಸ್ಯೆ ಶುರುವಾಯಿತು. ಅಣ್ಣನೆ ಪೂಜೆಮುಂದುವರಿಸ ಬೇಕು ಅನ್ನೊ ಆಸೆ ಅಜ್ಜನಿಗೆ ಇತ್ತಾದರೂ ಅವರ ನಿರ್ಧಾರವನ್ನ ಎಲ್ಲೂ ಹೇಳಿರಲಿಲ್ಲ. ನನ್ನ ಅಪ್ಪನಿಗಾಗಲಿ,ನನ್ನ ದೊಡ್ಡಪ್ಪನಿಗಾಗಲಿ ಜವಾಬ್ದಾರಿ ಮುಂದುವರೆಸೊ ಇಚ್ಚೆ ಇರಲಿಲ್ಲ, ಆ ಸಮಯದಲ್ಲಿ ಎಲ್ಲರ ಮುಂದೆ ಇದ್ದ ದಾರಿ ಅಂದ್ರೆ, ಒಬ್ಬ ನನ್ನ ಅಣ್ಣ ಅಂದರೆ ನಿನ್ನ ಮಾವ ಕೇಶವ ಮೂರ್ತಿ, ಇನ್ನೊಬ್ಬ ನನ್ನ ದೊಡ್ಡಪ್ಪನ ಮಗ ನೀಲಕಂಠ!!! ವಯಸ್ಸಿನಲ್ಲಿ ನನ್ನ ಅಣ್ಣನಿಗಿಂತ ನೀಲಕಂಠ ದೊಡ್ಡವನು, ಆದರೆ ಗುಣದಲ್ಲಿ ಮಹಾನ್ ಕಟುಕ, ಅವನ ತಾಯಿಯ ತರಾನೆ ಸುಳ್ಳುಗಾರ ಮೋಸಗಾರ. ಒಂದು ಸರ್ತಿ ಅವನು ಅವನ ತಾಯಿನು ಸೇರ್ಕೊಂಡು ನನ್ನ ದೊಡ್ಡಪ್ಪನ ಮೇಲೆ ಕೈ ಮಾಡಿದ್ರು ಅನ್ನೋ ಸುದ್ದೀನು ಇತ್ತು. ಈ ಕಾರಣಕ್ಕಾಗಿ ಅಜ್ಜನಿಗೆ ಅವನ ತಲೆ ಕಂಡ್ರೆ ಆಗ್ತಾ ಇರ್ಲಿಲ್ಲ.  ಹಿರಿತನದ ಆಧಾರದಲ್ಲಿ ನೀಲಕಂಠನಿಗೆ ಮೊದಲ ಆದ್ಯತೆ ಅಂತ ಅವನ ತಾಯಿ ಮಗನ ಪರವಾಗಿ ಪೂಜೆಯ ಹಕ್ಕಿನ ವಿಷಯವಾಗಿ ಗಲಾಟೆ ಶುರುಮಾಡಿದ್ಲು, ಅವಳೊಂದು ಘಾಟಿ ಹೆಂಗಸು, ಅವಳ ಬಾಯಿಗೆ ಗಂಡಸು ಹೆಂಗಸು ಅನ್ನೊ ಭೇದ ಇರಲಿಲ್ಲ.
ಆದರೆ ನನ್ನ ತಂದೆ ಆಗಲಿ, ತಾಯಿಯಾಗಲಿ ನನ್ನ ಅಣ್ಣನ ಪರವಾಗಿ ನಿನ್ನಲೆ ಇಲ್ಲ, ಅಣ್ಣ ಏಕಾಂಗಿಯಾಗಿ ವಿರೋಧಿಸಬೇಕಾಗಿ ಬಂತು, ಪೂಜೆಯ ಹಕ್ಕು ಕೈತಪ್ಪುತ್ತಲ್ಲಾ ಅನ್ನುವುದಕ್ಕಿಂತ ಜಾಸ್ತಿ ನಿನ್ನ ಮಾವನಿಗೆ ನೀಲಕಂಠನನ್ನ ವಿರೋಧ ಮಾಡೊದಿಕ್ಕೆ ಬೇರೆಯದೆ ಆದ ಒಂದು ಬಲವಾದ ಕಾರಣ ಇತ್ತು.”  ಅಂತ ಅಮ್ಮ ಮಾತು ನಿಲ್ಲಿಸಿದಳು.

ನಾನು ಅಮ್ಮನ ಮುಖವನ್ನೇ ನೋಡ್ತಾ   “ಏನಮ್ಮ ಕಾರಣ????” ಅಂದೆ

ಅಮ್ಮ ದೀರ್ಘವಾದ ಉಸಿರಿ ತೆಗೊಂಡು “ನೀಲಕಂಠನ ತಾಯಿ, ಅವಳ ಬಗ್ಗೆ ಒಂದು ವಿಷಯಕ್ಕೆ ಕೇಶವನಿಗೆ ಸಂಪೂರ್ಣ ವಿರೋಧ ಇತ್ತು. ಅವಳುಜಾತಿಯಲ್ಲಿ ಬ್ರಾಹ್ಮಣಳು, ಆದರೆ ಪದ್ದತಿಯಲ್ಲಿ ಅವಳು, ಅವಳ ತಾಯಿಮನೆಯವರು ಶಿವನ ಆರಾಧಕರ ಪಂಗಡಕ್ಕೆ ಸೇರಿದವರು. ನಿನ್ನ ಮಾವನ ಪ್ರಕಾರ ಶಿವಾರಾಧಕರು ವಿಷ್ಣು ಪೂಜೆಗಾಗಲಿ, ಮಡಿಯ ವಿಷಯಕ್ಕಾಗಲಿ, ಸಲ್ಲರು ಅನ್ನೊದು, ನೀಲಕಂಠ ಅವಳ ಹೊಟ್ಟೆಯಲ್ಲಿ ಹುಟ್ಟಿದವನಾದ್ದರಿಂದ, ಅವನೂ ಕೂಡ ವಿಷ್ಣುಪೂಜೆಗೆ ಅನರ್ಹ ಅನ್ನೋದು. ಅದಷ್ಟೆ ಅಲ್ಲದೆ ಅಡ್ಡನಾಮಧಾರಿಗಳು ಮಡಿಗೆ ನಿಷಿದ್ದರು ಅನ್ನೊದು ಅಜ್ಜನ ನಿರ್ಧಾರವು ಆಗಿತ್ತು ಅಂತ ಅವನು ವಾದ ಮುಂದಿಟ್ಟ, ಈ ವಿಷಯವಾಗಿ ಊರ ಹಿರಿಯರ ಮುಂದೆ ವಾದ ವಿವಾದವೂ ಆಯ್ತು, ಪದ್ದತಿಯ ವಿಷಯ ಬಂದಾಗ ನೀಲಕಂಠನ ತಾಯಿ ಮೂಲತಃ ಶಿವನಆರಾಧಕರಾಗಿದ್ದರೂ ಕೂಡ ಆಕೆ ಕೈ ಹಿಡಿದಿದ್ದು ಮಾಧವ ಮೂರ್ತಿ ಅನ್ನೊ ಹರಿಭಕ್ತರ ಪಂಗಡಕ್ಕೆ ಸೇರಿದವರನ್ನ, ಹಾಗಾಗಿ ಇವರಿಬ್ಬರಿಗೆ ಹುಟ್ಟಿದ ಮಗು ತಂದೆಯ ಅಂದರೆ ಹರಿಭಕ್ತರ ಪಂಗಡಕ್ಕೆ ಸೇರುತ್ತದೆ, ಹಾಗಾಗಿ ಮಡಿಯ ವಿಷಯವಾಗಿ ಯಾವುದೇ ತೊಂದರೆ ಇಲ್ಲ, ಹಾಗೆ ಹಿರಿತನದ ಆಧಾರದಲ್ಲಿ ನೋಡಿದರೂ ಸಹ ನೀಲಕಂಠನಿಗೆ ಪೂಜೆಯ ಮೊದಲ ಹಕ್ಕು ಅಂತ ಹಿರಿಯರ ತೀರ್ಮಾನವಾಯ್ತು. ನೀಲಕಂಠ್ ಒಬ್ಬ ಮೋಸಗಾರ, ಕೆಟ್ಟವನು ಅಂತ ಗೊತ್ತಿದ್ದರು ಸಹ ಊರ ಜನ ಆ ಹಾಳು ಹೆಂಗಸಿನ ಬಾಯಿಗೆ ಹೆದರಿ ಈ ನಿರ್ಧಾರಕ್ಕೆ ಬಂದು ಬಿಟ್ಟರು. ಆದ್ರೆ ನಿನ್ನ ಮಾವನಿಗೆ ಇದರಿಂದ ಸಮಾಧನ ಇರಲಿಲ್ಲ, ಅವತ್ತಿಂದ ಇವತಿನವರೆಗು ಆ ಶಿವ, ಶಿವಭಕ್ತರು ಅನ್ನೊ ಇಡೀ ಸಮೂಹವೇ ಕೆಟ್ಟವರು, ಅದು ಕೆಟ್ಟದು, ಅವರು ಸುಳ್ಳು ಹೇಳೊ ಜನ, ಮೋಸಗಾರರು ಅಂತ ತಿರಸ್ಕಾರದಿಂದಲೇ ನೋಡ್ತಾ ಇರ್ತಾನೆ, ಮಡಿಯ ವಿಷಯ ಬಂದಾಗ ಅವರ ನೆರಳೂ ಬೀಳಬಾರದು ಅಂತ ಯೋಚನೆ ಮಾಡ್ತಾನೆ. ಮುಂದೆ ಅರ್ಚಕನಾಗಿ ನೀಲಕಂಠನೆ ನೇಮಕಗೊಂಡ, ಮನೆಯವರಿಂದ ದೂರ ಇದ್ದು ಪೂಜೆ ಮಾಡಬೇಕು ಅನ್ನೊ ನಿಯಮಾನ ಮುರಿದ, ಅದಕ್ಕೂ ಕೇಶವ ಗಲಾಟೆ ಮಾಡಿದ, ಅದೊಂದು ಹಳೆ ಕಾಲದ ಸಂಪ್ರದಾಯ, ಈಗಿನ ಕಾಲದಲ್ಲಿ ಅದರ ಪಾಲನೆ ಕಷ್ಟ ಸಾಧ್ಯ ಅಂತ ಊರ ಹಿರಿಯರು ಅದರಿಂದ ರಿಯಾಯಿತಿ ಪಡೆಯ ಬಹುದು ಅಂತ ಹೇಳಿದ್ರು.

ಹೀಗೆ ನಿನ್ ಮಾವ ಎಲ್ಲಾ ವಿಷಯದಲ್ಲೂ ಕುಗ್ಗಿ ಹೋದ ಮನೆಯವರಿಂದ ದೂರವಾದ, ಅವನ ನಿರ್ಧಾರಗಳಿಗೂ ಮನೆಗೂ ಸಂಬಂಧ ಇಲ್ಲವೇನೋ ಅನ್ನೊ ತರ ಇದ್ದ, ಮುಂದೆ ನನ್ನ ಮದುವೇನು ಆಯ್ತು, ಅವನು ಯಾವಾಗಲೊ ಮನೆಗೆ ಬರ್ತಾ ಇದ್ದ, ಮನೆಯಲ್ಲಿ ಅಪ್ಪ ಅಮ್ಮ ಇಬ್ಬರೆ ಆಗಿಬಿಟ್ರು, ಹುಷಾರಿಲ್ಲದೆ ಹಾಸಿಗೆ ಹಿಡಿದಿದ್ದ ನನ್ನ ಅಮ್ಮ ಒಂದು ದಿವಸ ತೀರಿಕೊಂಡು ಬಿಟ್ಟಳು. ಒಂಟಿ ಬಾಳು ಬಾಳ್ತಾ ಇದ್ದ ಅಪ್ಪನ ಒಂದು ನಿರ್ಧಾರ ಅಣ್ಣನನ್ನ ಊರು ಬಿಡೊ ಹಾಗೆ ಮಾಡಿತು.”

“ಹೌದು, ಅಜ್ಜಯ್ಯ ಆ ವಯಸ್ಸಿನಲ್ಲಿ ಎರಡನೆ ಮದುವೆ ಮಾಡಿ ಕೊಂಡ್ರು ಅಲ್ವ ಅಮ್ಮ? ಮಾವ ಊರು ಬಿಟ್ಟು ಹೋಗಿದ್ದು ಅದಿಕ್ಕೆ ಅಲ್ವ?” ಅಂತ ಕೇಳ್ದೆ, ಅಜ್ಜಯ್ಯನ ಎರಡನೇ ಮದುವೆಯ ವಿಚಾರ ಸ್ವಲ್ಪ ಸ್ವಲ್ಪ ನನಗೂ ಗೊತ್ತಿತ್ತು.

“ಹೌದು, ಆದರೆ ಅಪ್ಪನ ಎರಡನೇ ಮದುವೆಗೆ ಅಣ್ಣನು ಒಪ್ಪಿದ್ದ,……. ಆದರೆ ಅಪ್ಪನ ನಿರ್ಧಾರ ಅವನ ಕಣ್ಣಿನಲ್ಲಿ ಅವರನ್ನ ಮತ್ತೆ ಕೆಟ್ಟವನ್ನಾಗಿ ಮಾಡಿಸ್ತು, ಅಪ್ಪ ಮದುವೆ ಆಗ ಬೇಕಾಗಿದ್ದ ಹೆಂಗಸಿನ ವಿಚಾರ.

ಅವಳೂ ಒಬ್ಬಳು ವಿಧವೆ ಹೆಂಗಸು, ಅಪ್ಪನ ಕೊನೆಗಾಲದಲ್ಲಿ ಆಸರೆಯಾಗಿ ಇರ್ತಾಳೆ ಅನ್ನೊ ಕಾರಣಕ್ಕೆ ಅವರ ಮದುವೆಗೆ ನಾವೆಲ್ಲ ಒಪ್ಪಿಗೆ ಕೊಟ್ವಿ, ಆದರೆ ಆ ಹೆಂಗಸು”  ಅಂತ ಅಮ್ಮ ಮತ್ತೆ ಮಾತು ನಿಲ್ಲಿಸಿದ್ರು.


ನನಗೆ ಅರ್ಧಂಬರ್ಧ ತಿಳಿಯಿತಾದರೂ ಅಮ್ಮನನ್ನ ಅದೇ ವಿಷಯವಾಗಿ ಕೇಳ್ದೆ     “ಆ ಹೆಂಗಸೂ ಕೂಡ ಶಿವನಭಕ್ತ ಪಂಗಡಕ್ಕೆ….?” ಅಂತ ಮಾತು ಅರ್ಧಕ್ಕೆ ನಿಲ್ಲಿಸಿದೆ.

ಅಮ್ಮನ ಕಣ್ಣುಗಳಲ್ಲಿ ನಂಗೆ ಉತ್ತರ ಸಿಕ್ಕಿತು.

ಮತ್ತೆದೇ ಕಾರಣಕ್ಕೆ ಅವರು ವರ್ಷಗಟ್ಟಳೆ ಊರು ಬಿಟ್ಟು ಹೋಗಿದ್ರು, ಯಾವ ವಿಷಯದಲ್ಲಿ ನೀಲಕಂಠ ಮತ್ತವನ ತಾಯಿಯ ವಿರುದ್ಧವಾಗಿ ನಿಂತರೋ, ಇವತ್ತು  ಅದೇ ವಿಷಯ ಅವರ ಮನೆಯಲ್ಲಿ ಅಮ್ಮನ ಸ್ಥಾನದಲ್ಲಿ ಬಂದು ನಿಲ್ಲೋಕೆ ಸಿದ್ದವಾಗಿತ್ತು. ಶಿವಭಕ್ತರ ಪಂಗಡಕ್ಕೆ ಸೇರಿದ ಒಂದು ಹೆಂಗಸನ್ನ ಅವರ ಅಮ್ಮನ ರೂಪದಲ್ಲಿ ನೋಡೊಕೆ ಅವರು ಸಿದ್ದರಿರಲಿಲ್ಲ. 

ಊಟ ಮಾಡಿ ಮಲಗೋಕೆ ತಯಾರಾದ ನನಗೆ ಮತ್ತದೇ ಯೋಚನೆ, ಮಾವನ ಈಗಿನ ಪರಿಸ್ಥಿಗೆ ಕಾರಣ ಯಾರು? 
ನಮ್ಮ ವಂಶಕ್ಕೆ ಪೂಜೆಯ ಹಕ್ಕು ಅಂತ ಬರೆದಕೊಟ್ಟ ಆ ರಾಜಾನ? ಅವನ ತಾಮ್ರದ ತಗಡ? ಮಾವನ ಮನಸ್ಸಿನಲ್ಲಿ ಹರಿ ಶಿವ ಅಂತ ಕಂದಕ ನಿರ್ಮಿಸಿದ ನನ್ನ ಮುತ್ತಜ್ಜನ? ಅವರು ಬರೆದ ಈ ಗ್ರಂಥಾನ? ಎಲ್ಲವೂ ಗೊತ್ತಿದ್ದು ಮತ್ತೆ ಮದುವ ಆದ ನನ್ನ ಅಜ್ಜಯ್ಯನ? ನೀಲಕಂಠನ? ಅವನ ತಾಯಿನ? ಅಥವ ಅವರ ಪರವಾಗಿ ನಿಂತ ಜನಗಳ? 
ಅಷ್ಟಕ್ಕೂ ಈ ಗ್ರಂಥದಲ್ಲಿ ಏನಿದೆ?....... ಏನು ಬೇಕಾದ್ರು ಆಗಲಿ ಇವತ್ತು ಇಡೀ ಈ ಗ್ರಂಥವನ್ನ ಓದಿ ಮುಗಿಸ ಬೇಕು ಅಂತ ಕುಳಿತೆ.


“ಮನುಷ್ಯ ಮನುಷ್ಯನಾಗಿ ಹೇಗೆ ಬಾಳಬೇಕು ಅಂತ ಹೇಳುವುದೇ ನಿಜವಾದ ಧರ್ಮ” ಅನ್ನೊ ಸಾಲಿನಿಂದ ನನ್ನ ಮುತ್ತಜ್ಜನ ಆ ಗ್ರಂಥ ಪ್ರಾರಂಭವಾಗಿತ್ತು. ವೇದ ಉಪನಿಷದ್ ಗಳಿಂದ ನಾವು ಕಲಿಯಬೇಕಾದದ್ದು ಏನು? ದೇವರಿಗೆ ನಮ್ಮ ಬದುಕಿನಲ್ಲಿ ಯಾವ ಸ್ಥಾನಮಾನವಿದೆ ಹೀಗೆ ಕೆಲವೊಂದು ವಿಷಯಗಳು, ಕೆಲವು ಪುಟಗಳು ಕನ್ನಡದಲ್ಲೇ ಇತ್ತು. ಮುಂದೆ ‘ವಿಷ್ಣುಸಹಸ್ರನಾಮ’ ಎಂಬ ಭಾಗದಿಂದ ಎಲ್ಲವೂ ಸಂಸ್ಕೃತಮಯವಾಯ್ತು. ನಾನು ಸಂಸ್ಕೃತದಲ್ಲಿ ಪಂಡಿತನಲ್ಲದಿದ್ದರೂ, ಸಾಮಾನ್ಯವಾಗಿ ಓದಿ ಅರಿತುಕೊಳ್ಳುವಷ್ಟು ಸಂಸ್ಕೃತ ಜ್ಞಾನವಿತ್ತು. ಆದರೆ ನನ್ನ ಮುತ್ತಜ್ಜನ ಸಂಸ್ಕೃತ ವ್ಯಾಖ್ಯಾನದ ಎದುರು ನಾನು ಬಹುಪಾಲು ಸೋತು ಹೋಗಿದ್ದೆ. ತುಂಬಾ ಉತ್ಕೃಷ್ಟಮಟ್ಟದಲ್ಲಿದ್ದ ಅವರ ಭಾಷಾ ಶೈಲಿಯಿಂದ, ಸಂಸ್ಕೃತದಲ್ಲಿ ಸಾಮಾನ್ಯ ಜ್ಞಾನಿಯಾಗಿದ್ದ ನನಗೆ ಹೆಚ್ಚಿನ ವಿಷಯಗಳು ಕಗ್ಗಂಟಾಗಿಯೇ ಉಳಿದು ಕೊಳ್ತು. ಆ ವಿಷ್ಣುವಿನ ಸಾವಿರ ನಾಮಗಳಿಗೆ, ಒಂದೊಂದು ನಾಮಕ್ಕೂ ಅನೇಕ ಅರ್ಥಗಳನ್ನ ವ್ಯಾಖ್ಯಾನ ರೂಪದಲ್ಲಿ ವಿವರಿಸಲ್ಪಟ್ಟಿತ್ತು. ಅದರಲ್ಲಿ ಕೆಲವೊಂದು ವಿಷಯಗಳನ್ನ ನನಗೆ ಅರ್ಥ ಅಗೊ ರೀತಿಯಲ್ಲಿ ಗ್ರಹಿಸಿಕೊಂಡೆ.  ಮುಂದೆ ಸಹಸ್ರಾನಾಮದ ನಂತರ ‘ಇತರ ಧರ್ಮವಿಚಾರಗಳು’ ಅಂತ ಮತ್ತೆ ಕನ್ನಡದ ಪುಟಗಳು ಕಾಣಿಸಿಕೊಂಡವು.

ಆಗಲೆ ಗಂಟೆ 12 ದಾಟಿತ್ತು. ಆದರೆ ನಂತರ ಶುರುವಾದ ಕನ್ನಡದ ಪುಟಗಳಲ್ಲಿ ಧಾರ್ಮಿಕ ವಿಚಾರಗಳ ಬಗ್ಗೆ ಮುತ್ತಜ್ಜನ ಜ್ಞಾನದ ಹೊಳೆಯನ್ನ ಹರಿಸೋವಂತಹ ಆ ಪುಟಗಳನ್ನ ಮುಚ್ಚಿ ಮಲಗೋ ಮನಸ್ಸೇ ಆಗಲಿಲ್ಲ, ಅಲ್ಲಿ ಇನ್ನೊಂದು ಅಚ್ಚರಿಯ ಸಂಗತಿ ಅಂದರೆ ಅವರು ಬರೆದಿರೋ ವಿಚಾರಗಳಲ್ಲಿ ಎಲ್ಲಿಯೂ ಸಹ ಅವರು ವಿಷ್ಣು ಅಂತಾಗಲಿ, ಶಿವ ಅಂತಾಗಲಿ ಯಾವ ದೇವರ ಹೆಸರೂ ಉಲ್ಲೇಖವಿಲ್ಲ, ಕೇವಲ ಸರ್ವಶಕ್ತನಾದ ಭಗವಂತ ಅನ್ನೊ ಶಬ್ದಗಳು ಮಾತ್ರ ಇತ್ತು. ಅದು ಯಾವುದೋ ಒಬ್ಬ ದೇವರ ವಿಚಾರವಾಗಿ ಬರೆದಿರೊದಲ್ಲ, ದೇವರು ಅನ್ನೊ ವಿಷಯದ ಬಗ್ಗೆ ಮನುಷ್ಯನ ಮನಃಸ್ಥಿತಿ ಹೇಗಿರಬೇಕು ಅನ್ನೊದರ ಬಗ್ಗೆ ಬರೆದಿರೋದು. ಓದುವ ಸಂದರ್ಭದಲ್ಲಿ ಅಲ್ಲಿ ವಿಷ್ಣುವನ್ನ ಗ್ರಹಿಸಿಕೊಂಡರೆ ವಿಷ್ಣುವುನ ಬಗ್ಗೆ ಬರೆದ ಪುಸ್ತಕ ಅಂತಲೂ, ಶಿವನನ್ನ ನೆನೆಸಿ ಕೊಂಡರೆ ಅದು ಶಿವನ ಕುರಿತಾದ ಪುಸ್ತಕ ಅಂತಲೂ ನಮಗೆ ಭಾಸವಾಗುವ ರೀತಿಯಲ್ಲಿ ಆ ಗ್ರಂಥದ ನಿರೂಪಣೆ ಇತ್ತು.
ಹಿಂದಿನ ದಿವಸ ಮಾವ ನನ್ನಲ್ಲಿ ಒಂದು ಸವಾಲು ಹಾಕೊ ರೀತಿಯಲ್ಲಿ ಒಂದು ಮಾತು ಹೇಳಿದ್ರು, “ನನ್ನಲ್ಲಿರುವ ತಪ್ಪನ್ನ ನೀನು ತೋರಿಸಿ ಕೊಡು”   ಅಂತ ಹೇಳಿದ್ರು ಈಗ ಆ ಸವಾಲನ್ನ ಎದುರಿಸ ಬಲ್ಲೆ ಅನ್ನೊ ಧೈರ್ಯ ನನ್ನಲ್ಲಿ ಬಂದಿತ್ತು. ಈಗಾಗಲೆ ನಾನು ಪುಸ್ತಕದ ಕೊನೆಯ ಭಾಗಕ್ಕೆ ಬಂದಿದ್ದೆ, ಕೊನೆಯಲ್ಲಿ ಅವರು ಪೂಜೆ ಮಾಡ್ತಾ ಇದ್ದ ವಿಷ್ಣುಮೂರ್ತಿ ದೇವಸ್ಥಾನದ ಹಿನ್ನಲೆ ಬಗ್ಗೆಯೂ ವಿವರಣೆ ಇತ್ತು, 

“ಈ ದೇವಸ್ಥಾನ ಫಾಲ್ಗುಣವಂಶದ ದೊರೆ ಎರಡನೇ ವಿಷಕಂಠರಾಯನಿಂದ ಕಟ್ಟಿಸಲ್ಪಟ್ಟಿದೆ, ಮೂಲತಃ ಫಾಲ್ಗುಣ ವಂಶಸ್ಥರು ಶಿವ ಭಕ್ತರು, ಫಾಲ್ಗುಣೇಶ್ವರ ಅವರ ಕುಲದೇವರು, ಈ ರಾಜವಂಶದ ಮೂಲ ಪುರುಷ ಕಟ್ಟಿಸಿದ ಫಾಲ್ಗುಣೇಶ್ವರ ದೇವಾಲಯವು ಕಲಾಧರ ನದಿಯ ಪಕ್ಕದಲ್ಲಿ, ಮಂಜಿನ ಕೊಪ್ಪದಲ್ಲಿ ಈಗಲೂ ಇದೆ. ಬಹಳ ಹಿಂದೆ ವಿಷಕಂಠರಾಯ ಎಂಬ ರಾಜನಿಗೆ ಬಹಳ ವರ್ಷ ಮಕ್ಕಳಿರಲಿಲ್ಲ, ಮಹಾನ್ ವಿಷ್ಣುವನ್ನು ನೆನೆದು ಹರಕೆ ಹೊತ್ತ ಈತನಿಗೆ ಗಂಡು ಮಗು ಹುಟ್ಟಿತು, ಹರಕೆಯನ್ನ ತೀರಿಸುವ ರೂಪದಲ್ಲಿ ಆತ ವಿಷ್ಣುಮೂರ್ತಿ ದೇವಾಲಯವನ್ನ ಕಟ್ಟಿಸಿದ. ಅವತ್ತಿನಿಂದ ನಮ್ಮ ವಂಶಜರೇ ಅಲ್ಲಿ ಪೂಜಾ ಕಾರ್ಯಗಳನ್ನ ನಡೆಸುತ್ತಾ ಬಂದಿದ್ದಾರೆ. ಮುಂದೆ ಅಧಿಕಾರಕ್ಕೆ ಬಂದ ಅವನ ಮಗ ರಾಜ ಮಹಾಬಲರಾಯ., ಅವನ ಕಾಲದಲ್ಲಿ ಪೂಜೆಯ ಹಕ್ಕನ್ನ ನಮ್ಮ ವಂಶಜರ ಹೆಸರಿಗೆ ಖಾಯಂ ಮಾಡಿಬಿಟ್ಟ. ಮಹಾಬಲರಾಯ ಶಿವಭಕ್ತರ ವಂಶದಲ್ಲಿ ಹುಟ್ಟಿದವನಾದರೂ ಕೂಡ ಪೂಜೆಯ ವಿಷಯದಲ್ಲಿ ಹರಿಭಕ್ತರ ಕಡೆ ಅವನಿಗೆ ಒಲವು ಹೆಚ್ಚಿತ್ತೆಂದು ಕಂಡುಬರುತ್ತದೆ. ತನ್ನದೇ ಆದ ಶಿವಭಕ್ತರ ಪಂಗಡದಲ್ಲಿ ದೇವರ ಮಡಿಯ ವಿಷಯದಲ್ಲಿ ಅವನಿಗೆ ಬಹಳಾ ಅಸಮಾಧಾನವಿತ್ತು ಎಂಬ ವಿಷಯ ಈ ಹಿಂದೆ ನನ್ನ ಅನೇಕ ಹಿರಿಯರಿಂದ ಕೇಳಿ ತಿಳಿದಿದ್ದೆ. ಅದೇ ಕಾರಣಗಳಿಂದಾಯೆ ಏನೊ  ಅವನು ಹರಿಭಕ್ತರಿಗೆ ಪೂಜೆಯ ಹಕ್ಕನ್ನು ಬರೆದು ಕೊಟ್ಟಿರಬಹುದು”
ಅಲ್ಲಿನ ನಂತರದ ಹಾಳೆಗಳು ಖಾಲಿ ಇದ್ದವು, ಪುಸ್ತಕದ ಕೊನೆ ಭಾಗ ಅಪೂರ್ಣವಾಗಿ ಇರೊ ಹಾಗೆ ಕಾಣಿಸ್ತಾ ಇರೋದ್ರಿಂದ, ಇದು ಪೂರ್ಣವಾಗೊ ಮೊದಲೇ ಮುತ್ತಜ್ಜ ಕಾಲವಾಗಿರ ಬೇಕು ಅಂದು ಕೊಂಡೆ. ಇಷ್ಟು ಓದಿ ಮುಗಿಸಿದ ನನಗೆ ಒಂದು ವಿಷಯದ ಬಗ್ಗೆ ತುಂಬಾ ಆಶ್ಚರ್ಯ ಆಗಿತ್ತು, ಈ ಗ್ರಂಥದ ಕೊನೆಯ ಭಾಗದಲ್ಲಿ ಅಂದರೆ ರಾಜಾ ಮಹಾಬಲರಾಯನ ವಿಷಯಕ್ಕೆ ಬಂದಾಗ ಮಾತ್ರ ಅವರು, ಹರಿಭಕ್ತರು, ಶಿವಭಕ್ತರು, ಮಡಿ ಅನ್ನೊ ವಿಷಯಗಳನ್ನ ಬರೆದದ್ದು ಹೊರತು ಪಡಿಸಿದರೆ ಇಡೀ ಪುಸ್ತಕದಲ್ಲಿ ಮತ್ತೆಲ್ಲೂ ಮಡಿಯ ವಿಷಯವಾಗಿ ಆಗಲಿ ಬೇರಾವುದೆ ವಿಷಯದಲ್ಲಾಗಲಿ ಎರಡೂ ಪಂಗಡಗಳ ನಡುವೆ ಭೇದವಿದೆ ಅನ್ನುವ ವಿಷಯವನ್ನ ಪ್ರಸ್ತಾಪ ಮಾಡಿರಲಿಲ್ಲ. ಅದು ಅಲ್ಲದೆ ಕೊನೆಯ ಸಾಲುಗಳಲ್ಲಿ ರಾಜ ಮಹಾಬಲರಾಯ ಮಡಿಯ ವಿಷಯವಾಗಿ ಅವನು ಆ ನಿರ್ಧಾರಕ್ಕೆ ಬಂದಿದ್ದಾನೆ ಎಂಬುದು ಅವರ ವೈಯಕ್ತಿಕ ನಿರ್ಧಾರವಾಗಿರಲಿಲ್ಲ, ಅವರು ಅವರ ಹಿರಿಯರಿಂದ ತಿಳಿದು ಕೊಂಡ ವಿಷಯಕ್ಕೆ ಕೇವಲ ಅನಿಸಿಕೆ ಹೇಳಿದ್ದಾರೆ ಅಷ್ಟೆ. ಅಂದರೆ ಮುತ್ತಜ್ಜನಿಗೆ ವೈಯಕ್ತಿವಾಗಿ ಶಿವಭಕ್ತರು, ಹರಿಭಕ್ತರು ಅನ್ನೊ ಭೇದ ಭಾವ ಇರಲಿಲ್ಲ, ನೀಲಕಂಠನನ್ನ ಅವನ ಗುಣ ಸ್ವಭಾವಕ್ಕೆ ವಿರೋಧಿಸುತ್ತಾ ಇದ್ದರೆ ಹೊರತು ಅವನು ತಾಯಿಯ ಪಂಗಡವನ್ನ ಆಧರಿಸಿ ಅಲ್ಲ ಅನ್ನೋದು ಸ್ಪಷ್ಟ.

ಹಾಗಾದರೆ ಮಾವನ ಈ ಸ್ಥಿತಿಗೆ ಕಾರಣ ಯಾರು? ಮುತ್ತಾನು ಅಲ್ಲ, ಅಜ್ಜಯ್ಯನು ಅಲ್ಲ, ನೀಲಕಂಠನೂ ಅಲ್ಲ, ಅವನ ತಾಯಿಯು ಅಲ್ಲ, ಜನಗಳು ಅಲ್ಲ, ಅಂದರೆ ಈ ಪರಿಸ್ಥಿತಿಗೆ ಮಾವನೇ ಕಾರಣ!!! ಹೌದು ಅವರ ಈಗಿನ ಪರಿಸ್ಥಿತಿಗೆ ಅವರೇ ಕಾರಣ.  ಈಗ ನನಗೆ ಎಲ್ಲ ಸ್ಪಷ್ಟವಾಗ್ತಾ ಹೋಯ್ತು, ಅವತ್ತಿನ ದಿನ ಅವರ ಮಡಿಲಲ್ಲೆ ಸತ್ತು ಹೋದ ಅಜ್ಜನ ಸಾವಿನ ವಿಷಯವನ್ನ ಎದುರಿಸೋಕೆ ಮಾವ ಮಾನಸಿಕವಾಗಿ ಸಿದ್ದರಿರಲಿಲ್ಲ, ಅಜ್ಜ ಈ ಗ್ರಂಥದಲ್ಲಿ ಧರ್ಮವಿಚಾರವಾಗಿ ಬರೆದದ್ದು ವಿಷ್ಣುವಿನ ಕುರಿತಾಗಿ ಅಂತ ಅವರು ತಿಳಿದು ಕೊಂಡಿದ್ದಾರೆ, ಸರ್ವ ಶಕ್ತ ಭಗವಂತವನ ರೂಪದಲ್ಲಿ ಮಾವ ಗ್ರಹಿಸಿ ಕೊಂಡದ್ದು ಮಹಾವಿಷ್ಣುವನ್ನ.

ಹೌದು ಅಲ್ಲಿ ಆಗಿದ್ದು ಮತ್ತೇನು ಅಲ್ಲ, ಸಂಪೂರ್ಣವಾಗಿ ವಿಷ್ಣುಮಯವಾಗಿದ್ದ ಅವರ ಮನಸ್ಸು ಕೊನೆಯಲ್ಲಿ ಮಡಿಯ ವಿಚಾರ ಬಂದಾಗ ರಾಜನ ನಿರ್ಧಾರದ ವಿಷಯದಲ್ಲಿ ಅಜ್ಜ ವ್ಯಕ್ತಪಡಿಸಿದ ಅನಿಸಿಕೆಯನ್ನ ಇದು ಮಡಿ ವಿಚಾರದಲ್ಲಿ  ಅಜ್ಜನ ಖಚಿತ ನಿರ್ಧಾರ ಅಂತ ತಪ್ಪಾಗಿ ಅರ್ಥೈಸಿ ಕೊಂಡ್ರು. ಅದಕ್ಕೂ ಮೇಲಾಗಿ ಇದು ವಿಷ್ಣುಕುರಿತಾದ ಪುಸ್ತಕ ಅನ್ನೊದಕ್ಕಿಂತ ಜಾಸ್ತಿ ಇದು ಶಿವನ ವಿರುದ್ದವಾಗಿ ಅಜ್ಜ ಬರೆದ ಪುಸ್ತಕ ಅಂತ ಅವರು ನಂಬಿ ಕೊಂಡ್ರು, ಇದಾದ ಮೇಲೆ ಪೂಜೆಯ ವಿಷಯವಾಗಿ ನೀಲಕಂಠನ ತಾಯಿ ಮಾಡಿದ ರಂಪಾಟ, ಅಪ್ಪನ ಎರಡನೆ ಮದುವೆ, ಅವರಲ್ಲಿದ ಹರಿಭಕ್ತಿಯ ಜೊತೆಗೆ ಅವರ ಮಾನಸಿಕ ಭಾವನೆಗಳ ಮೇಲಾದ ಆಘಾತ, ಸಮಾಜದ ಒಂದು ಇಡಿಯ ಸಮೂಹವನ್ನೆ ದ್ವೇಷದಿಂದ ಕಾಣೊಹಾಗೆ ಮಾಡಿದೆ.  

“ಆ ಶಿವನೇ ಸ್ಮಶಾನವಾಸಿ, ಮೈಯೆಲ್ಲ ಬೂದಿ ಮೆತ್ತಿಕೋಂಡಿರೋನು ಇನ್ನು ಅವನ ಆರಾಧಕರು ಬಾಹ್ಯವಾಗಿಯು ಮಾನಸಿಕವಾಗಿಯು ಎಷ್ಟು ನಿರ್ಮಲರು” ಅಂತ ನಿನ್ನೆ ಅವರು ಆಡಿದ ಮಾತುಗಳೆ ಮಾವನ ಮನಃಸ್ತಿತಿಯನ್ನ ಸೂಚಿಸುತ್ತೆ. ಇದಕ್ಕಿರೋದು ಒಂದೆ ದಾರಿ ನೆನ್ನೆ ಮಾವ ಹಾಕಿರೊ ಸವಾಲನ್ನ ಸ್ವೀಕರಿಸೊದು, ಮಡಿಯ ವಿಷಯದಲ್ಲಿ ಅವರ ಮನಸಲ್ಲಿರೊ ತಪ್ಪು ನಂಬಿಕೆಯನ್ನ ಓಡಿಸೋದು.


ಬೆಳಗ್ಗೆ ಎದ್ದಾಗ 8 ಗಂಟೆ, ಸ್ನಾನ ಮಾವನ ಮನೆಗೆ ಹೊರಡೊಣ ಅಂತ ಸಿದ್ದನಾದೆ, ಮಧ್ಯೆ ಅನಂತನ ಮನೆಗೆ ಹೋಗಿ ಅಲ್ಲಿಂದ ಮಾವನ ಮನೆಗೆ ಹೋಗ್ಬೇಕು ಅಂತ ಹೊರಟೆ, ಮನೆಯಲ್ಲಿ ತುಂಬಾ ಕೆಲಸ ಬಾಕಿ ಇರೋದ್ರಿಂದ ಅಮ್ಮ ಆಮೇಲೆ ಬರ್ತೀನಿ ಅಂದ್ರು.  ಅನಂತನ ಮನೆಗೆ ಹೋದವನು ಅವನನ್ನ ಮಾತನಾಡಿಸಿ ಅಲ್ಲಿಂದ ಹೊರಬಿದ್ದೆ ಮಾವನ ಮನೆ ಹತ್ರ ಹೋದಾಗ ಯಾರೊ ಒಬ್ಬ ಮಗೂನ ಹೆಗಲ ಮೇಲೆ ಕೂರುಸ್ಕೊಂಡು ಅವಸರ ಅವಸರವಾಗಿ ಹೋಗೋದು ಕಾಣಿಸ್ತು, ದೂರದಿಂದ ನೋಡಿದ್ರೆ ನಮ್ ಮನೆ ಕೆಲಸದವ ಚೆನ್ನನ ಹಾಗೆ ಕಾಣಿಸ್ತು. ಜೋರಾಗಿ ಚೆನ್ನ ಅಂತ ಒಂದು ಕೂಗು ಹಾಕಿದೆ ಓಡ್ತಾ ಇದ್ದವನು ನಿಂತು ನನ್ನ ಕಡೆ ನೋಡಿದ, ನಾನೆ ಸ್ವಲ್ಪ ವೇಗವಾಗಿ ಅವನತ್ತ ಹೋದೆ,

“ಏನೊ ಅರ್ಜಂಟಲ್ಲಿ ಎಲ್ಲಿ ಹೋಗ್ತಾ ಇದಿಯ?” ಅಂದೆ

“ಮತ್ತೆಲ್ಲಿ ಸ್ವಾಮಿ…. ನಿಮ್ಮ ಮಾವನ ಮನೇಲಿ ಪೂಜೆ ಅಲ್ವ, ತುಂಬಾ ಕೆಲಸ ಇದೆ ಬೇಗ ಬಾ ಅಂತ ಹೇಳಿದ್ರು” ಅಂದ

“ಹೌದ… ಸರಿ ನಡಿ ನಾನು ಅಲ್ಲಿಗೆ ಹೋಗ್ತಾ ಇದಿನಿ, ಇದೇನು ಮಗೂನು ಕರ್ಕೊಂಡು ಬಂದಿದಿಯ?” ಅಂದೆ

“ನಮ್ಮನೇಲಿ ನಾನು ನನ್ ಹೆಂಡ್ತಿ ಬಿಟ್ರೆ ಮಗೂನ ನೋಡ್ಕೊಳೊಕೆ ಯಾರು ಇಲ್ಲ, ಕೆಲಸಕ್ಕೆ ಹೋಗಬೇಕಾದರೆ ಒಂದು ದಿವಸ ಮಗೂನ ಅವಳು ಕರ್ಕೊಂಡು ಹೋಗ್ತಾಳೆ, ಇನ್ನೊಂದು ದಿವಸ ನಾನು, ಇವತ್ತು ನನ್ನ ಸರದಿ” ಅಂದ

“ಹೂಂ ಪರವಾಗಿಲ್ಲ ಒಳ್ಳೆ Understanding ಇದೆ” ಅಂದೆ
ಹಿ,ಹಿ.ಹಿ ಅಂತ ಹಲ್ಲು ಕಿರಿದ



ಮಾವನ ಮನೆ ಬಂದೇ ಬಿಡ್ತು, ಸಂಜೆ ಬರ್ತೀನಿ ಅಂದವನು ಬೆಳಗ್ಗೇನೆ ಬಂದದ್ದು ನೋಡಿ ಅವರಿಗೆ ತುಂಬಾ ಖುಷಿ ಆಯ್ತು

“ಏನೊ, ಬೆಳಿಗ್ಗೆನೆ ಹಾಜರ್ ಆಗ್ಬಿಟ್ಟಿದಿಯ…. ರಾತ್ರಿಯೆಲ್ಲ ಕೂತ್ಕೊಂಡು ಈ ಪುಸ್ತಕವನ್ನ ಓದಿರ್ಬೇಕು ಅಲ್ವ” ಅಂದ್ರು
ಆಶ್ಚರ್ಯದಿಂದ “ನಿಮಗೆ ಹೇಗೆ ಗೊತ್ತಯ್ತು?????” ಅಂದೆ

“ಇದನ್ನ ಓದಿದ ಮೇಲೆ, ಗೆಳೆಯನಿಗಿಂತ ಮಾವನ ಮನೆ ಪೂಜೆನೆ ಸರಿ ಅಂತ ಅನಿಸಿರ ಬೇಕು ಅಲ್ವ? ಅಂತ ನಕ್ಕು ಬಿಟ್ರು

ಅವರು ಯಾವ ಅರ್ಥ ಇಟ್ಟು ಕೊಂಡು ಆ ಮಾತನ್ನ ಕೇಳಿದ್ರು ಅಂತ ನಂಗೆ ಅರ್ಥ ಆಯ್ತು

“ಇಲ್ಲ ಮಾವ ಅವನು ಸಂಜೆ ಸಿಕ್ತೀನಿ ಅಂದ, ಅದಿಕ್ಕೆ ಬೆಳಗ್ಗೇನೆ ಇಲ್ಲಿಗ್ ಬಂದೆ” ಅಂತ ಹೇಳಿದೆ

“ಸರಿನಪ್ಪ ಹೋಗು ತಿಂಡಿ ತಿನ್ನು” ಅಂತ ಹೇಳಿ ಅವರು ಏನೊ ಕೆಲಸಕ್ಕೆ ಅಂತ ಹೊರಟರು

“ಮಾವ ಅಂತ ಕರೆದೆ” ನನ್ನ ಕಡೆ ತಿರುಗಿದ್ರು “ನಿನ್ನೆ ಒಂದು ಪ್ರಶ್ನೆ ಕೇಳಿದ್ರಿ ನಿಮ್ಮಲ್ಲಿರೊ ತಪ್ಪನ್ನ ಕಂಡು ಹಿಡಿಯೋಕೆ ಸಾಧ್ಯಾನ ಅಂತ”

ಅವರ ಮುಖದ ಬದಲಾವಣೆಯನ್ನ ನಾನು ಗಮನಿದೆ ಸ್ವಲ್ಪ ಕೋಪ ಬಂತು ಅನ್ಸುತ್ತೆ

“ಓ ಆ ವಿಷ್ಯಾನ…. ಒಂದು ಕೆಲಸ ಮಾಡು, ಪೂಜೆ ಮುಗೀಲಿ ಆಮೇಲೆ ನಾನು ನಿನ್ ಹತ್ರ ಮಾತಾಡ್ತೀನಿ, ಈಗ ಸ್ವಲ್ಪ ಕೆಲಸ ಇದೆ” ಅಂದ್ರು

“ಇಲ್ಲ ನನಗೇನು ಅರ್ಜೆಂಟಿಲ್ಲ, ಅದು ಅಲ್ಲದೆ ನಂಗೆ ಕ್ಲಾಸ ರೂಂ ತರ ಪಾಠ ಮಾಡೋಕೆ ಬರೊಲ್ಲ, ಸಮಯ ಬಂದಾಗ ನಾನು ಹೇಳ ಬೇಕು ಅಂತ ಇರೊ ಮಾತನ್ನ ಹೇಳ್ತಿನಿ, ನೀವು ಹಾಗೆ ಕೇಳಿಸ್ಕೊಂಡು ಅದನ್ನ ಅರ್ಥ ಮಾಡ್ಕೊಂಡು ಯೋಚನೆ ಮಾಡಿದ್ರೆ ಸಾಕು” ಅಂದೆ           ಅವರೇನು ಹೇಳದೆ ಸರಿ ಅನ್ನೋ ರೀತಿಯಲ್ಲಿ ತಲೆ ಅಲ್ಲಾಡಿಸಿ ಬೀಟ್ಟು ಹೊರಟು ಹೋದ್ರು.

ತಿಂಡಿ ತಿಂದ ನಂತರ ದೇವರ ಮನೆಯತ್ತ ಹೋದೆ ಮಾವ ಅಲ್ಲೇ ಇದ್ದರು, ಕೆಲವೊಂದು ಚಿಕ್ಕ ಪುಟ್ಟ ಕೆಲಸವನ್ನ ಮಾಡ್ತ ನಾನು ಅಲ್ಲೆ ಕೂತೆ. ಅಷ್ಟುಹೊತ್ತಿಗೆ ನಮ್ಮ ಚೆನ್ನ ತುಂಡು ಬಟ್ಟೆ ಸುತ್ತಿಕೊಂಡು ಒಂದು ಪಾತ್ರೆಯನ್ನ ತಂದು 

“ಸ್ವಾಮಿ ಪೂಜೆಗೆ ಹಾಲು, ಎಲ್ಲಿಡ್ಲಿ?” ಅಂದ

“ಪೂಜೆಗ? ಹಾಲ? ನಿನ್ ಹತ್ರ ತರೋದಿಕ್ಕೆ ಯಾರೊ ಹೇಳಿದ್ದು?” ಅಂತ ಜೋರಾಗಿ ಕೇಳ್ದೆ

“ಅಯ್ಯಾವರೆ ಹೇಳಿದ್ದು ಹಸು ಹಾಲು ಕರ್ದು ತರೋಕೆ”  ಅಂದ

“ಪೂಜೆಗೆ ಬೇಕಾಗಿದ್ದು ಮಡಿ ಹಾಲು ಕಣೊ” ಅಂದೆ

“ನಾನು ಸ್ನಾನ ಮಾಡಿ ಮಡಿಯಲ್ಲೆ ಹಾಲು ತಂದಿದ್ದು ಸ್ವಾಮಿ” ಅಂತ ಹೆದರಿಕೊಂಡು ಹೇಳ್ದ

“ನಿನ್ನ ಸ್ನಾನದ ಮಡಿಯನ್ನ ನಾನು ಕೇಳಿಲ್ಲ, ನೀನು ಬ್ರಾಹ್ಮಣನ? ಅಂದೆ….ಹಾಗೆ ಮುಂದುವರೆಸಿಕೊಂಡು 
“ಮಡಿ ಅಂದ್ರೆ ನಿಂಗೇನು ಗೊತ್ತು ದೇವರ ಪೂಜೆಗೆ ಮಡಿ ಹಾಲು ಬೇಕು, ಅಂದ್ರೆ ಮಾವನೊ ಇಲ್ಲ ಯಾರಾದ್ರು ಮನೆಯವರು ಹಾಲು ಕರಿ ಬೇಕು ಅಲ್ವ ಮಾವ?” ಅಂತ ನನ್ನ ಹಿಂದೆ ಕೂತ್ಕೊಂಡಿದ್ದ ಮಾವನನ್ನ ಕೇಳಿದೆ.

 ಅವರು ಅಷ್ಟು ಹೊತ್ತಿನಿಂದ ಚೆನ್ನನ ಜೊತೆ ಮಾತನಾಡೊದನ್ನ ಗಂಭೀರವಾಗಿ ಕೇಳಿಸ್ಕೋಳ್ತಾ ಇದ್ರು, ಚೆನ್ನನಿಗೆ ಅಲ್ಲಿಂದ ಹೋಗೋಕೆ ಹೇಳಿ

“ಇಲ್ಲಿರೊ ಸಾವಿರ ಕೆಲಸ ಬಿಟ್ಟು ಹಾಲು ಕರೀತ ಕೂತುಕೊಳ್ಬೇಕ? ಹಾಲು ಅಮೃತಕ್ಕೆ ಸಮಾನ ಅದಕ್ಕೆಂತಾ ಮಡಿ? ಅಷ್ಟಕ್ಕು ಅವನು ಸ್ನಾನ ಮಾಡಿ ಹಾಲು ಕರೆದಿದ್ದು ಅಂತ ಹೇಳಿದ್ನಲ್ವ ಅವನು” ಅಂತ ಮಾವ ರೇಗಿದ್ರು.

“ಅಡ್ಡ ನಾಮ ಹಾಕೊ ಬ್ರಾಹ್ಮಣರೆ ಮಡಿಗೆ ಸಲ್ಲರು ಅಂದಮೇಲೆ, ಮಾಂಸ ಮಡ್ಡಿ ತಿನ್ನೊ ಚೆನ್ನ ಕೆಲಸದವನು ಮಡಿ ಹೇಗಾಗ್ತಾನೆ ಅಂತ ಯೋಚನೆ ಮಾಡ್ದೆ” ಅಂತ ಮೆಲ್ಲ ಧ್ವನಿಯಲ್ಲಿ ಬಡಬಡಿಸಿದೆ. ಮಾವ ಏನು ಮಾತಾನಾಡದೆ ಸೀದ ಹೊರಗೆ ಎದ್ದು ಹೋದ್ರು. 

ಅಂತು ಮಾವನ ಮನಸಿನಲ್ಲಿರೋ ಭೂತವನ್ನ ಕೊಲ್ಲೊದಿಕ್ಕೆ ನಾನು ಬಿಟ್ಟ ಮೊದಲನೇ ಬಾಣ ಅದರ ಗುರು ತಲುಪಿದೆ ಅನ್ನಿಸ್ತು.

ಸತ್ಯನಾರಾಯಣ ಪೂಜೆಗೆ ಪುರೋಹಿತರು ಬಂದ್ರು, ಕಳಶ ಬಿಂದಿಗೆಗೆ ತುಂಬಿಸೋದಿಕ್ಕೆ ಮಡಿಯಲ್ಲಿ ಒಂದು ಕೊಡ ನೀರು ಬೇಕು ಅಂದ್ರು, ಮಾವ ಕಣ್ಣು ಸನ್ನೆಯಲ್ಲಿ ನನ್ನ ನೀರು ತರೋದಿಕ್ಕೆ ಹೇಳಿದ್ರು ನಾನು ಅಲ್ಲಿಂದಲೆ ಜೋರಾಗಿ ಚೆನ್ನನನ್ನ ಕೂಗಿ ಒಂದು ಬಿಂದಿಗೆ ನೀರು ತರೋದಿಕ್ಕೆ ಹೇಳಿದೆ,  ಆಗ ಅಲ್ಲಿದ್ದ ಪುರೋಹಿತರು

“ಹೇ ಮಡಿ ನೀರು ಕಣೊ ಹೇಳಿದ್ದು, ನೀನೆ ತೆಗೊಂಡು ಬಾ” ಅಂದ್ರು

“ಅವನು ಮಡೀನೆ, ಆಗ್ಲೆ ಸ್ನಾನ ಮಾಡಿ ಮಡಿಯಲ್ಲಿ ಹಾಲು ತೆಗೊಂಡು ಬಂದಿದ್ದ” ಅಂತ ಪುರೋಹಿತರ ಹತ್ರ ಹೇಳ್ದೆ

“ಹೇ ಯಾರಯ್ಯ ನಿನಗೆ ಮಡಿ ಮೈಲಿಗೆ ಪಾಠ ಹೇಳಿಕೊಟ್ಟಿದ್ದು ಮೂರ್ಖ” ಅಂತ ಆ ಭಟ್ರು ನನಗೆ ಬಯ್ದ್ರು

“ನನಗ್ಯಾಕೆ ಭಟ್ರೆ ಬಯ್ತೀರ, ಕೇಳಿ ಮಾವನ್ನ, ಸ್ವಲ್ಪ ಹೊತ್ತಿಗೆ ಮುಂಚೆ ಚೆನ್ನ ಹಾಲು ತಂದಾಗ ನಾನು ಇದನ್ನೇ ಹೇಳಿದ್ದಕೆ, ಮಾವಾನೆ ಹೇಳಿದ್ದು ಹಾಲು ಅಮೃತ ಸಮಾನ, ಅದಕ್ಕೇನು ಅಂತ ಮಡಿ ಇಲ್ಲ ಅಂತ, ಅದೂ ಅಲ್ಲದೆ ಅವನು ಸ್ನಾನ ಮಾಡಿ ಹಾಲು ಕರ್ದಿದಾನೆ ಅಂದ್ರು. ನೀವೆ ಯೋಚನೆ ಮಾಡಿ ಹಾಲು ಅಮೃತ ಆದ್ರೆ ಮನುಷ್ಯನ ಜೀವ ಉಳಿಸೋ ಜೀವ ಜಲ ನೀರು ಕೂಡ ಅಮೃತ ಸಮಾನನೆ ಅಲ್ವ? ಹಾಲು ಕುಡೀದೆ ಇದ್ರು ಬದುಕ ಬಹುದು, ನೀರು ಕುಡಿದಿದ್ರೆ ಬದುಕೋಕೆ ಸಾಧ್ಯಾನ? ಅದೂ ಅಲ್ಲದೆ ಹಾಲಾದ್ರೆ ಕಷ್ಟಾ ಪಟ್ಟು ಕರೀ ಬೇಕು, ನೀರಾದ್ರೆ ಬಾವಿಯಿಂದ ಸೇದೋದು ಅಷ್ಟೆ, ಇಂತ ಸುಲಭ ಕೆಲಸಕ್ಕೆ ಹಾಲಿಗೆ ಇದ್ದಿದ್ದಿಕ್ಕಿಂತ ಜಾಸ್ತಿ ಮಡಿ ಬೇಕ?” ಅಂದೆ

ನನ್ನ ಮುಖವನ್ನೆ ನೋಡ್ತಾ ಇದ್ದ ಭಟ್ಟರು ನನ್ನ ಮಾವನ ಮುಖವನ್ನೊಮ್ಮೆ ನೋಡಿದ್ರು, ನನ್ನ ಮಾವ ಮತ್ತೆ ನನ್ನ ಮುಖವನ್ನ ನೋಡಿ ಮತ್ತದೇ ಸಿಟ್ಟಿನಿಂದ ತಾವೆ ನೀರು ತರೋಕೆ ಎದ್ದು ಹೋದ್ರು.

 ನನ್ನ ಎರಡನೇ ಬಾಣವೂ ಕೂಡ ಗುರಿ ತಲುಪಿದ ಸೂಚನೆ ಕಾಣಿಸ್ತಾ ಇತ್ತು. 

ಪೂಜೆಗೆ ಎಲ್ಲ ಸಿದ್ದತೆ ಆಗಿತ್ತು ಆದರೆ ಪೂಜೆ ಇನ್ನು ಪ್ರಾರಂಭ ಆಗಿರ್ಲಿಲ್ಲ. ನನ್ನ ಅಮ್ಮ ಕೂಡ ಬಂದಿದ್ರು, ಅವರು ಹೇಳಿದ ಮೇಲೆ ಗೊತ್ತಾಯ್ತು ಪೂಜೆ ನಡೆಸೋಕೆ ದೊಡ್ಡ ಪುರೋಹಿತರ ಬರಬೇಕು ಅಂತ. ನಮ್ಮ ಮಾವ ಮನೆ ಬಿಟ್ಟು ಹೋಗಿದ್ದಾಗ ಇದೇ ಗುರುಗಳ ಹತ್ರ ಇದ್ದು ವಿಧ್ಯಾಭ್ಯಾಸ ಮುಂದುವರೆಸಿದ್ರಂತೆ. 
ಸ್ವಲ್ಪ ಹೊತ್ತಲ್ಲಿ ಅವರೂ ಬಂದ್ರು, ಮಾವ ಅವರನ್ನ ಕೋಣೆಗೆ ಕರೆದು ಹೋಗಿ ಕೂತ್ಕೊಳ್ಸಿದ್ರು. ಹೊರಗಡೆ ಬಂದು ಚೆನ್ನನ ಹತ್ರ ಎಳನೀರು ಕೊಚ್ಚೊದಿಕ್ಕೆ ಹೇಳಿದ್ರು ಅದನ ತೆಗೆದು ಕೊಂಡು ಒಳಗೆ ಬಂದು ಅವರೆ ತೂತು ಮಾಡಿ ಕೊಟ್ರು.

ಮೂರನೆ ಬಾಣಕ್ಕೆ ನನ್ನ ಬಿಲ್ಲು ಸಿದ್ದವಾಯ್ತು

“ಮಾವ ಏನು ಮಾಡ್ತಾ ಇದಿರ, ಅವರು ಮಡೀಲಿ ಪೂಜೆ ಮಾಡೋಕೆ ಬಂದ್ರೆ ನೀವು ಯಾವ ಎಳನೀರು ಕೊಡ್ತಾ ಇದಿರ?” ಅಂದೆ ಅಲ್ಲಿದ ದೊಡ್ದ ಪುರೋಹಿತರು, 
ಜೊತೆಗಿದ್ದ ಇನ್ನೊಬ್ಬ ಪುರೋಹಿತ, ನನ್ನ ಮಾವ ಎಲ್ಲರು ಗಲಿಬಿಲಿ ಆಗಿಬಿಟ್ರು.

ದೊಡ್ಡ ಪುರೋಹಿತರು “ಯಾಕಪ್ಪ ಏನಾಯ್ತು ಏನಾಗಿದೆ ಈ ಎಳನೀರಿಗೆ?” ಅಂದ್ರು

“ಇದು ಮಡಿ ಎಳನೀರು ಅಲ್ಲ”  ಅಂತ ಮೆಲ್ಲಗಿನ ಸ್ವರದಲ್ಲಿ ಹೇಳಿದೆ, ನನ್ನ ಮಾವನಿಗೂ ಜೊತೆಗಿದ್ದ ಇನ್ನೊಬ್ಬ 
ಪುರೋಹಿತನಿಗೂ ಸಿಟ್ಟು ಬಂತು.

“ಹೇ ಹುಡುಗ ನಿಂದು ಜಾಸ್ತಿ ಆಯ್ತು, ಬೆಳಗ್ಗೆ ಇಂದ ನೋಡ್ತಾ ಇದಿನಿ” ಅಂತ ಇನ್ನೊಬ್ಬ ಪುರೋಹಿತನಿಗೆ ನನ್ನ ಮೇಲೆ 
ಸಿಟ್ಟು ಬಂತು. ಮತ್ತೆ ದೊಡ್ಡ ಪುರೋಹಿತರು

“ಏನ್ ಮಗು, ಕೇಶವ ಮಡಿಯಲ್ಲೆ ಇದನ್ನ ಕೊಟ್ಟಿದ್ದು, ಮಡಿ ಎಳನೀರು ಅಲ್ಲ ಅಂದ್ರೆ ನಿನ್ನ ಮಾತಿನ ಅರ್ಥ ತಿಳ್ಕೊಳ್ಬೋದ?” ಅಂತ ಸೌಮ್ಯವಾಗಿ ಕೇಳಿದ್ರು.

“ಏನಿಲ್ಲ ಸ್ವಾಮಿ ಬೆಳಗ್ಗೆ ಹಾಲನ್ನ ಕೆಲಸದವನು ತಂದುಕೊಟ್ಟ, ಅವನು ಸ್ನಾನ ಮಾಡಿದಾನೆ ಅದು ಮಡಿ ಅಂದ್ರು, ಕಳಶ ತುಂಬಿಸೋದಿಕ್ಕೆ ನೀರು ಕೇಳಿದಕ್ಕೆ ನಾನು ಕೆಲಸದವನಿಗೆ ಹೇಳಿದೆ, ಅದು ಮಡಿ ಆಗಲ್ಲ ಅಂತ ಹೇಳಿ ಮಾವಾನೆ ನೀರು ತಂದ್ರು, ಈಗ ನೀವು ಕುಡಿತಾ ಇರೊ ಎಳನೀರು ಮರದಿಂದ ಕುಯ್ದಿದ್ದು, ಕೆಲಸದವನು, ಕೊಚ್ಚಿದ್ದು ಕೆಲಸದವನು, ತೂತು ಮಾಡಿ ಕೊಟ್ಟಿದ್ದು ಮಾತ್ರ ಮಾವ, ಅದು ಮಡಿ ಹೇಗಾಗುತ್ತೆ?, ಎಳನೀರಿಗೂ, ಬಾವಿ ನೀರಿಗು ಯಾಕೆ ಈ ವ್ಯತ್ಯಾಸ, ಎರಡೂ ಪ್ರಕೃತಿಯಲ್ಲೆ ಸಿಗೋದು ಅಲ್ವ?, ಈ ನೀರು ಕಾಯಿಯೊಳಗಡೆ ಇದ್ರೆ ಆ ನೀರನ ಬಿಂದಿಗೆಯಲ್ಲಿ ತರಬೇಕು ಅದು ಬಿಟ್ರೆ ಬೇರೆ ಏನ್ ವ್ಯತ್ಯಾಸ ಇದೆ” ಅಂದೆ

ಅವ್ರು ನನ್ನನ್ನ ನೋಡಿ ಮುಗುಳ್ನಕ್ಕು “ತುಂಬ ಬುದ್ದಿವಂತ ನೀನು” ಅಂತ ಹೇಳಿ ಸೀದ ದೇವರ ಮನೆಯತ್ತ ಹೋದರು. ಅಲ್ಲೆ ನಿಂತಿದ್ದ ಮಾವ ನನ್ನ ಮುಖನೋಡಿ ಅಸಹನೆಯಿಂದ ತಲೆ ತಗ್ಗಿಸಿ ಪುರೋಹಿತರನ್ನ ಹಿಂಬಾಲಿಸಿದ್ರು.

ಪೂಜೆ ಪ್ರಾರಂಭ ಆಯ್ತು, ನೆಂಟರು, ಇಷ್ಟರು ಎಲ್ಲಾ ಮನೆ ತುಂಬಿ ಕೊಂಡ್ರು, ಅವರೆಲ್ಲ ಸಾಮಾನ್ಯ ಮನುಷ್ಯ ಹಾಗೆ ಕಂಡರೆ ವಿನಃ ಅವರು ಹರಿ ಭಕ್ತರು ಅನ್ನೊದಿಕ್ಕೆ ಕೆಲವರ ಮುಖದಲ್ಲಿ ಕಂಡ ಉದ್ದ ನಾಮ ಬಿಟ್ಟರೆ, ಅವರು ಯಾರ ಭಕ್ತರು ಅಂತ ಅನ್ನೊದಿಕ್ಕೆ ಅವರ ಮುಖದಲ್ಲಿ ಮತ್ಯಾವ ಗುರುತಾಗಲಿ ಸಾಕ್ಷಿಯಾಗಲಿ ಇರಲಿಲ್ಲ. ಪೂಜೆಗೆ ಕುಳಿತ ಮಾವನನ್ನ ನೋಡಿದ್ರೆ ಗೊತ್ತಾಗ್ತಾ ಇತ್ತು. ಪೂರ್ತಿ ಶ್ರದ್ದೆಯಿಂದ ಅವರು ಪೂಜೆ ಮಾಡ್ತಾ ಇರ್ಲಿಲ್ಲ, ಯಾರಿಗೆ ಗೊತ್ತ ಅವರ ಏಕಾಗ್ರತಾ ಭಂಗಕ್ಕೆ ಒಂದು ರೀತಿ ನಾನು ಕಾರಣನಿರ ಬಹುದು.

ಪೂಜೆ ಮುಗಿಯಿತು, ಪೂಜೆಯ ನಂತರ ಊಟ, ಅದೂ ಮುಗಿಯಿತು, ನಾನು ನನ್ನ ಪಾಲಿನ ಕೆಲಸ ಗಳನ್ನ ಮುಗಿಸಿ ಮಾವನ ಎರಡನೇ ಮಗ ಶ್ರೀಹರಿಯನ್ನ ಮಡಿಲಲ್ಲಿ ಕೂರಿಸ್ಕೋಂಡು ಸ್ವೀಟ್ ತಿನ್ನಿಸ್ತಾ ಕೂತಿದ್ದೆ. ಒಳಗಡೆಯಿಂದ ನನ್ನ ಮಾವ ಮತ್ತವರ ಗುರುಗಳು ಹೊರಗಡೆ ಬಂದ್ರು. ಮಾವನ ಗುರುಗಳು ಸ್ವಲ್ಪ ನಿದ್ರೆ ಮಾಡ್ತೀನಿ ಅಂತ ಪಕ್ಕದ ಕೋಣೆಯೊಳಗೆ ಹೋದರು. ಅಲ್ಲಿಂದ ಮಾವ ಸೀದ ನನ್ನ ಹತ್ರಾ ಬಂದ್ರು

“ನಿಂದು ಊಟ ಆಯ್ತ?” ಅಂತ ಕೇಳಿದ್ರು ಅವರ ಧ್ವನಿಯಲ್ಲೆ ಗೊತ್ತಾಗ್ತಾ ಇತ್ತು ಇನ್ನು ನನ್ನ ಮೇಲಿನ ಸಿಟ್ಟಿದೆ ಅಂತ. ನಾನು ಶ್ರೀಹರಿಯನ್ನ ಅಲ್ಲೆ ಕೆಳಗಡೆ ಕೂರಿಸಿ ಎದ್ದು ನಿಂತೆ

“ಹಾಂ ಆಯ್ತು ಮಾವ” ಅಂದೆ

“ನಿಜ ಹೇಳು, ನೀನು ಮತ್ತೆ ಊರಿಗೆ ಬಂದಿರೋ ಉದ್ದೇಶ ಏನು? ನನ್ನ ಮೇಲೆ ಸೇಡು ತೀರಿಸಿ ಕೊಳ್ಳೊದಿಕ್ಕೆ ಆ ನೀಲಕಂಠ ಏನಾದ್ರು ಕಳಿಸಿದ್ದಾನ?” ಅಂತ ವಿಚಿತ್ರ ಪ್ರಶ್ನೆ ಕೇಳಿದ್ರು.

“ಮಾವ ನಾನು ಈ ಊರು ಬಿಟ್ಟು 10ವರ್ಷದ ಮೇಲಾಗಿದೆ, ನೀವು ಹೇಳ್ತಾ ಇರೊ ನೀಲಕಂಠ…. ನಿಜ ಹೇಳಬೇಕು ಅಂದ್ರೆ ಅವರ ಮುಖ ನೋಡಿದ ನೆನಪುಕೂಡ ಇಲ್ಲ” ಅಂದೆ

“ಮತ್ಯಾಕೊ ಹೀಗೆ ನನ್ ಹಿಂದೆ ಬಿದ್ದಿದೀಯ???” ಅಂದ್ರು, ಅವರ ಧ್ವನಿಯಲ್ಲಾದ ಬದಲಾವಣೆಯನ್ನ ಗಮನಿಸಿದೆ ನೀರು ತುಂಬಿರೊ ಅವರ ಕಣ್ಣುಗಳನ್ನ ನೋಡಿದೆ.

“ಮಾವ ನಿಮ್ಮ ಮೇಲೆ ಯಾವ ದ್ವೇಷ ಭಾವನೆಯಿಂದಾನು ನಾನು ಮಾತನಾಡ್ತಾ ಇಲ್ಲ” ಅಂದೆ

“31 ವರ್ಷದೊಂದ ನನ್ನ ಅಜ್ಜ ಹೇಳಿರೋದನ್ನ ಇವತ್ತಿನವರೆಗೆ ಪಾಲಿಸಿ ಕೊಂಡು ಬಂದಿದಿನಿ”    ಅಂದ್ರು

“ಏನು ಪಾಲಿಸಿ ಕೊಂಡು ಬಂದಿದಿರ ಮಾವ? ಮಡಿ ಮಡಿ ಅಂತ ದ್ವೇಷ ಸಾಧಿಸೋಕೆ ಹೇಳಿದಾರ ನಿಮ್ಮ ಅಜ್ಜ, ಮಡಿ ಮಡಿ ಅಂತ ನಿಮ್ಮವರನ್ನೆಲ್ಲಾ ದೂರ ಮಾಡಿಕೊಂಡು ಊರು ಬಿಟ್ಟು ಹಠ ಹಿಡ್ಕೊಂಡು ಕೂತ್ಕೊ ಅಂತ ಹೇಳಿದಾರ? 
ನಿಮ್ಮ ಅಜ್ಜನ ಮಾತನ್ನ ಸರಿಯಾಗಿ ಅರ್ಥ ಮಾಡಿಕೊಂಡಿದ್ರೆ ನಿಮಗೆ ಇವತ್ತಿನ ಪರಿಸ್ಥಿತಿ ಬರ್ತಾ ಇರಲಿಲ್ಲ” ಅಂದೆ

“ಅಂದ್ರೆ ನೀನು ಹೇಳೊದು, ವಿಭೂತಿಧಾರಿಗಳನ್ನ ಮನೆಗೆ ಸೇರಿಸ್ಕೊ ಅಂತಾನ? ಮನೆಯ ಕೆಲಸದವರ ಹತ್ರ ಮಡಿಯಲ್ಲಿ ಮಾಡೊ ಪೂಜೆ ಕೆಲಸ ಮಾಡಿಸು ಅಂತಾನ?” ಅಂತ ಕೇಳಿದ್ರು.

“ನನ್ನ ಮಾತಿನ ಅರ್ಥ ಅದಲ್ಲ, ನಾನು….” ಅಂದಾಗ ಮಧ್ಯೆ ಬಾಯಿ ಹಾಕಿದ್ರು

“ನೀನು ಏನು ಹೇಳಿದ್ರು ಅಷ್ಟೆ, ನನ್ನ ನಂಬಿಕೆ ಬದಲಾಗಲ್ಲ, ನಾನಿರೋದೆ ಹೀಗೆ… ಬೆಳಗ್ಗೆ ಇಂದ ನೀನು ಹೇಳ್ತಾ ಇರೋದನ್ನ ಕೇಳ್ತಾ ಇದಿನಿ ನೀನ್ನ ಮಾತುಗಳನ್ನ ಸರಿ ಅಂತ ಒಪ್ಪಿಕೊಳ್ತೀನಿ, ಆದರೆ ಅದು ಮಾತಿಗೆ ಸೂಕ್ತವೇ ಹೊರತು ಕೃತಿಗಲ್ಲ” ಅಂದ್ರು ಅವರ ಮಾತಿನ ದನಿಯ ಬದಲಾವಣೆಯನ್ನ ಗಮನಿಸ್ತಾ ಇದ್ದೆ, ನನ್ನ ವಿಚಾರಗಳಿಗೆ ಅವರ ಒಪ್ಪಿಗೆ ಇದ್ದರೂ, ಒಪ್ಪಿಗೆ ಇಲ್ಲದೆ ಇರೋ ತರ ಮಾತನಾಡ್ತಾ ಇದಾರೆ ಅಂತ ನನಗೆ ಗೊತ್ತಾಗ್ತ ಇತ್ತು.

“ಅಂದ್ರೆ ಪ್ರತ್ಯಕ್ಷವಾಗಿ ಇಲ್ಲಾ ಅಂದ್ರು ಪರೋಕ್ಷವಾಗಿ ನಾನೆ ಸರಿ  ನೀವು ಒಪ್ಪಿಕೊಂಡ್ರಿ” ಅಂದೆ

ಸ್ವಲ್ಪ ಹೊತ್ತು ಸುಮ್ಮನಿದ್ದ ಮಾವ “ಅದು ಹಾಗಲ್ಲ “ ಅಂತ ತಪ್ಪಿತಸ್ಥರ ತರ ತಲೆ ಕೆಳಗೆ ಹಾಕಿದ್ರು

“ಸರಿಮಾವ ನನ್ನ ಮುಂದೆ ಸೋತೆ ಅಂತ ಹೇಳೊಕೆ ನಿಮಗೆ ನಾಚಿಕೆ ಆಗೊದಾದ್ರೆ, ಬೇಡ ಬಿಡಿ ನಿಮ್ಮ ಹಠಾನೆ ಗೆಲ್ಲಲಿ, ನಾನು ಇಲ್ಲಿಂದ ಹೋಗೊಕು ಮುಂಚೆ ಕೆಲವೊಂದು ಮಾತುಗಳನ್ನ ಹೇಳ್ಬಿಟ್ಟು ಹೋಗ್ತೀನಿ,” ಅಂದೆ
 ಅವರಿಂದ ಮೌನವಲ್ಲದೆ ಬೇರೇನು ಉತ್ತರ ಇರಲಿಲ್ಲ. ನಾನೆ ಮುಂದುವರೆಸ ಬೇಕಾಯಿತು. ಪಕ್ಕದಲ್ಲೇ ಇದ್ದ ಶ್ರೀಹರಿ ತೋರಿಸಿ

“ಮಾವ ಆ ಮಗೂ ಮುಖಾನ ನೋಡಿ, ನಮ್ಗು ಆ ಮಗೂಗು ಏನು ವ್ಯತ್ಯಾಸ?.... 
ನಾವಾದ್ರೆ ಬಾಯಾರಿಕೆ ಆದ್ರೆ ನೀರು ಕುಡಿತಿವಿ, ಹಸಿವಾದ್ರೆ ಊಟ ಮಾಡ್ತೀವಿ. ಅರ್ಜಂಟಾದ್ರೆ ಟಾಯ್ಲೆಟ್ ಹೋಗ್ತೀವಿ. ಆದ್ರೆ ಮಕ್ಕಳು? ಅವುಗಳಿಗೆ ತಾನಾಗೆ ಹೋಗಿ ನೀರು ಕುಡಿಯೋಕಾಗಲ್ಲ, ಹಸಿವಾಗ್ತಾ ಇದೆ ಅಂತ ಬಾಯಿ ಬಿಟ್ಟು ಹೇಳೊಕಾಗಲ್ಲ,  ಟಾಯ್ಲೆಟ್ ಅರ್ಜೆಂಟಾದರೆ ಅದು ಎಲ್ಲು ಹೋಗಲ್ಲ ಎಲ್ಲಂದ್ರಲ್ಲೆ ಮಾಡ್ತವೆ, ಅವ್ರಿಗೆ ದೇವರ ಮನೆ ಅಂತ ಇಲ್ಲ ಅಡುಗೆ ಮನೆ ಅಂತ ಇಲ್ಲ, ಮೈಮೇಲೆಲ್ಲಾ ಮಾಡ್ಕೊತವೆ. ಆದ್ರು ಕೂಡ ನಾವು ಮಕ್ಕಳನ್ನ ದೇವರು ಅಂತೀವಿ ಯಾಕೆ?....
ಯಾಕಂದ್ರೆ ಆ ಮಕ್ಕಳ ಮನಸ್ಸು, ನಿಷ್ಕಲ್ಮಶವಾಗಿರುತ್ತೆ ಅದಿಕ್ಕೆ….ದೇವರು ಅನ್ನೋದು ಹೇಗೆ ಮನಸ್ಸಿಗೆ ಸಂಬಂಧ ಪಟ್ಟ ವಿಷಯಾನೋ ಮಡಿ ನಂಬಿಕೆ ಅನೋದು ಕೂಡ ಮನಸ್ಸಿಗೆ ಸಂಬಂಧ ಪಟ್ಟ ವಿಷಯ. 
ಬೆಳಗ್ಗೆ ಹಾಲಿನ ವಿಷಯವಾಗಿ ನಾನು ನಿಮ್ಮ ಹತ್ರ ವಾದ ಮಾಡಿದೆ, ಹಾಲು ಅಮೃತ ಅಂದ್ರಿ ಸರಿ ಒಪ್ಕೊತೀನಿ, ನೀರಿನ ವಿಷಯಕ್ಕೆ ವಾದ ಮಾಡಿದೆ, ನಿಜ ಹೇಳಿ ಮಾವ ನೀರು ಅನ್ನೋದು ಜೀವ ಜಲ, ನೀರು ಹಾಲಿಗಿಂತ ಶ್ರೇಷ್ಟ ಅಲ್ವ? ನೀರು ಹಾಲಿಗಿಂತ ಶ್ರೇಷ್ಟ ಅಂತಾದ್ರೆ ನೀರು ಅಮೃತಕ್ಕಿಂತಲೂ ಶ್ರೇಷ್ಟ ಅಂತಾಯ್ತಲ್ವ? ಅದಕ್ಕೊಸ್ಕರ ಹಾಲು ತರೊವಾಗ ಇರೊಮಡಿಗಿಂತ ನೀರು ತರೋವಾಗ ಜಾಸ್ತಿ ಮಡಿಯ ಅವಶ್ಯಕತೆ ಇದೆ ಅಂತ ನಿಮಗೆ ವಾದ ಮಾಡ್ಬೋದಿತ್ತು ಅಲ್ವ? . ಆದ್ರೆ ನೀವು ಮಾತನಾಡಲಿಲ್ಲ ಯಾಕೆ? ನಿಮಗದರ ಅವಶ್ಯಕತೆ ಇರಲಿಲ್ಲ, ಹಿಂದಿನಿಂದ ನಡೆದುಕೊಂಡು ಬಂದಿದ್ದು ನಾನು ಹಾಗೆ ಮುಂದುವರೆಸಿಕೊಂಡು ಹೋಗ್ತೀನಿ ಅನ್ನೊ ಮನಃಸ್ಥಿತಿ ಇತ್ತು ನಿಮ್ಮಲಿ.

ಹಾಲು ಕೆಲಸದವ್ರು ತಂದರೆ ಅದು ಮಡಿ ಅಂತ ನಿಮ್ಮ ಮನಸ್ಸಿಗೆ ಅನ್ನಿಸುತ್ತೆ, ಎಳನೀರು ಕೆಲಸದವನು ತಂದರೆ ಅದು ಮಡಿ ಅಂತ ಅನ್ಸುತ್ತೆ. ಆದರೆ ಅದೇ ಪೂಜೆಗೆ ನೀರನ್ನ ಒಬ್ಬ ಕೆಲಸದವ್ನು ತಂದರೆ ನಿಮ್ಮ ಮನಸ್ಸಿಗೆ ಸರಿ ಅನ್ಸಲ್ಲ ಅಲ್ವ? ಒಬ್ಬ ನೀಲಕಂಠ, ಒಂದು ಹೆಂಗಸು ನಿಮಗೆ ಅನ್ಯಾಯ ಮಾಡಿದ್ರು ಅಂದ್ರೆ, ಅದಕ್ಕೆ ಅವರು ಕಾರಣಾನೆ ಹೊರತು ಅವರು ಪೂಜೆ ಮಾಡೊ ದೇವರು ಕಾರಣ ಅಲ್ಲ, ಅವರ ಇಡೀ ಪಂಗಡ ಕಾರಣವಲ್ಲ. ನಿಮ್ಮ ಅಪ್ಪ ನಿಮ್ಮ ಮಾತಿಗೆ ವಿರುದ್ದವಾಗಿ ಎರಡನೆ ಮದುಯಾದ್ರು ಅದಕ್ಕೆ ಅವರು ನಂಬಿರೊ ದೇವ್ರು ವಿಷ್ಣು ಕಾರಣ ಅಂತ ಹೇಳ್ತೀರ.

 ಮೊದಲು ಒಳ್ಳೆಯ ಯೋಚನೆಗಳನ್ನ ಮಾಡ್ತಾ ನಿಮ್ಮ ಮನಸ್ಸನ್ನ ಮಡಿಮಾಡ್ಕೊಳ್ಳಿ ಅವಾಗ ಇಲ್ಲಿ ಎಲ್ಲವು ಮಡಿಯ ಹಾಗೆ ಕಾಣುತ್ತೆ, ಎಲ್ಲಾರೂ ಶುದ್ದರಾಗೆ ಕಾಣ್ತಾರೆ” 

ಅಷ್ಟಕ್ಕೆ ಅವರ ಕಣ್ಣುಗಳು ಕುಗ್ಗಿ ಹೋಗಿದ್ದವು. ಮತ್ತೆ ನಾನೆ ಮುಂದುವರೆಸಿದೆ

“ಇಷ್ಟು ದಿವಸ ನಿಮ್ಮ ತಾತನ ಗ್ರಂಥವನ್ನ ಓದಿ ನೀವು ಒಂದು ವಿಚಾರವನ್ನ ನಂಬಿಕೊಂಡು ಬಂದಿದ್ರಿ, ಅದರಲ್ಲೆ ಇರೊ ಕೆಲವೊಂದು ವಿಷಯವನ್ನ ಹೇಳ್ತೀನಿ, ವಿಷ್ಣು ಸಹಸ್ರನಾಮದಲ್ಲಿ ಒಟ್ಟು ವಿಷ್ಣುವಿನ 1000 ಹೆಸರು ಗಳಿವೆ, ನೀವಂತು ಪಂಡಿತರು ಅದರಲ್ಲಿ ಬರೊ 27ನೇ ಹೆಸರು, 36ನೇ ಹೆಸರು, 74ನೇ ಹೆಸರು, 114ನೇ ಹೆಸರು, 378ನೇ ಹೆಸರುಗಳನ್ನ ಒಮ್ಮೆ ನೆನಪು ಮಾಡಿಕೊಳ್ಳಿ….27ನೆಯದು ಶಿವಾಯ ನಮಃ, 36ನೆಯದು ಈಶ್ವರಾಯ ನಮಃ, 74ನೆಯದು ಮತ್ತೆ ಈಶ್ವರಾಯ ನಮಃ, 114ನೆಯದು ರುದ್ರಾಯ ನಮಃ, 378ನೆಯದು ಪರಮೇಶ್ವರಾಯ ನಮಃ  

ನೀವೆ ಹೇಳಿದ ಹಾಗೆ ವಿಷ್ಣು ಸಹಸ್ರನಾಮದಲ್ಲಿ ಇರುವ ಅಷ್ಟೂ ಹೆಸರು ವಿಷ್ಣುವಿಗೆ ಸಂಬಂಧಪಟ್ಟಿದ್ದು ಅಂತಾದ್ರೆ, ಶಿವ, ಈಶ್ವರ, ರುದ್ರಾ, ಪರಮೇಶ್ವರ ಅನ್ನೊದು ವಿಷ್ಣುವಿನ ಹೆಸರು ಅಂತಾದ್ರೆ, ಶಿವ, ವಿಷ್ಣು ಒಂದೇ ಅಂತ ಆಯ್ತಲ್ವ? ನೀವು ಶಿವ ಭಕ್ತರನ್ನ ದೂಷಣೆ ಮಾಡ್ತೀರಿ ಅಂದರೆ ಒಂದು ರೀತಿಯಲ್ಲಿ ನೀವು ಹರಿ ಭಕ್ತರನ್ನ ದೂಷಣೆ ಮಾಡಿದ ಹಾಗಾಯ್ತಲ್ವ?..... ಶಿವ ಬೂದಿ ಮೆತ್ತಿ ಕೊಳ್ತಾನೆ ಅನ್ನೊ ಕಾರಣಕ್ಕೆ ಅವನ ಭಕ್ತರು ಶುದ್ದರಲ್ಲ ಅಂತ ಹೇಳೋದು ನಿಮ್ಮ ತಪ್ಪು ಕಲ್ಪನೆ. 

ಇದೇ ಪುಸ್ತಕದಲ್ಲಿ ನಿಮ್ಮ ಅಜ್ಜ ಏನು ಬರೆದಿದ್ದರಾರೆ ಗೊತ್ತಾ? “ಮನುಷ್ಯ ಮನುಷ್ಯನಾಗಿ ಹೇಗೆ ಬಾಳಬೇಕು ಅಂತ ಹೇಳುವುದೇ ನಿಜವಾದ ಧರ್ಮ” ಅಂತ…. ಆದರೆ ಇಲ್ಲಿ ಏನಾಗಿದೆ? ಧರ್ಮದ ವಿಷವನ್ನೇ ಇಟ್ಟು ಕೊಂಡು ಮನುಷ್ಯ ಇನ್ನೊಬ್ಬ ಮನುಷ್ಯನ ಮಧ್ಯೆ ದ್ವೇಷ ಬೆಳಿತಾ ಇದೆ. ದೇವರು ಇದಾನೆ ಅನ್ನೊ ನಂಬಿಕೆಯಿಂದ ಮನುಷ್ಯ ತಪ್ಪು ಮಾಡೋಕೆ ಹೆದರ್ ತಾನೆ ಅಂತಾರೆ, ಆದರೆ ಅದೇ ದೇವರ ಹೆಸರನ್ನ ಹೇಳಿಕೊಂಡು ಜಗಳ ಮಾಡೊ ನಮಗೆ ಧರ್ಮ, ದೇವರು ಯಾಕೆ ಬೇಕು?”

ಅಷ್ಟು ಹೊತ್ತಿಗೆ ಗೇಟ್ ಹತ್ತಿರ ನನ್ನ ಗೆಳೆಯ ಅನಂತ ನಿಂತಿರೋದು ಕಾಣಿಸ್ತು

“ಮಾವ ನಾನು ಹೇಳಿದ್ರಲ್ಲಿ ತಪ್ಪಿದ್ರೆ ದಯವಿಟ್ಟು ನನ್ನ ಕ್ಷಮಿಸಿ, ನನ್ನ ಮೇಲೆ ನಿಮಗೆ ಇನ್ನೂ ಸಿಟ್ಟಿದೆ ಅಂದ್ರೆ ನೀವಾಗೆ ನನ್ನನ್ನ ಕರೆಯೋವರೆಗು ನಾನು ಮತ್ತೆ ನಿಮ್ಮ ಮನೆಗೆ ಬರಲ್ಲ,,,,,, ನಾನಿನ್ನು ಹೊರಡ್ತೀನಿ” ಅಂತ ನಾನು ಅಲ್ಲಿಂದ ಹೊರ ಬಿದ್ದೆ.



ಅಳಿಯನ ಮಾತುಗಳನ್ನ ಕೇಳಿ ಕೇಶವ ಮೂರ್ತಿ ಗಳು ಸ್ಥಂಭೀಭೂತರಾಗಿದ್ದರು. ಹಿಂದಿನಿಂದ ಅವರ ಹೆಗಲ ಒಂದು ಕೈ ಅವರನ್ನ ಎಚ್ಚರಿಸಿತು. ತಿರುಗಿ ನೋಡಿದರೆ ಅವರ ಗುರುಗಳು,

“ಕೇಶವ ಇನ್ನೂ ಏನು ಯೋಚನೆ ಮಾಡ್ತಾ ಇದಿಯ?.... ಇಷ್ಟು ಹೊತ್ತು ನಿನ್ನ ಅಳಿಯ ಹೇಳಿದ ಮಾತುಗಳನ್ನ ಎಲ್ಲಾ ಕೇಳಿಸಿ ಕೊಂಡೆ, ಅವನು ಬುದ್ದಿವಂತ ಅಂತ ನಾನು ಬೆಳಗ್ಗೆನೆ ಹೇಳಿದ್ದೆ, ಅವನು ಅದನ್ನ ಹೌದು ಅಂತ ಈಗ ಸಾಧಿಸಿ ತೋರಿಸಿ ಬಿಟ್ಟ, 20 ವರ್ಷಗಳಿಂದ ನಿನ್ನ ಮನಸ್ಸಿನಲ್ಲಿರುವ ತಪ್ಪು ಆಲೋಚನೆಗಳನ್ನ ತಿದ್ದೊಕೆ ಎಷ್ಟೋ ಪ್ರಯತ್ನಪಟ್ಟೆ, ನನ್ನಿಂದ ಆಗದೆ ಇರೋದನ್ನ ಈ ಹುಡುಗ ಒಂದೆ ದಿವಸದಲ್ಲಿ ಮಾಡಿ ಮುಗಿಸಿದ್ದಾನೆ. ಹಾಗಾದ್ರೆ ಇಷ್ಟು ವರ್ಷ ನಾನು ನೀನು ವೇದ ಅಧ್ಯಯನ ಮಾಡಿದ್ವಲ್ಲ ಉಪಯೋಗ ಏನು ಬಂತು ಹೇಳು? ನೀನು ಇಷ್ಟು ದಿವಸ ಯಾವ ಪುಸ್ತಕವನ್ನ ಓದುತ್ತಾ ಬಂದಿದಿಯೋ, ಇವತ್ತು ಅವನೂ ಕೂಡ ಅದೇ ಪುಸ್ತಕದ ವಿಚಾರವನ್ನ ನಿನ್ನ ಮುಂದಿಟ್ಟಿದ್ದಾನೆ, ಇಷ್ಟು ದಿವಸ ನಿನ್ನ ಮನಸ್ಸಿನಲ್ಲಿದ್ದ ಋಣಾತ್ಮಕ ಅಲೋಚನೆಗಳಿಂದ ಈ ವಿಷಯಗಳು ನಿನ್ನ ಗಮನಕ್ಕೆ ಬರಲಿಲ್ಲ, ಶುದ್ಧ ಮನಸ್ಸಿನಿಂದ ಮತ್ತೆ ಆ ಗ್ರಂಥವನ್ನ ಓದು ಎಲ್ಲ ಒಳ್ಳೆಯದಾಗುತ್ತೆ.” ಅಂತ ಗುರುಗಳು ಮಾತು ಮುಗಿಸಿದ್ರು,

 ಅಲ್ಲೇ ಆಟ ಆಡ್ತಾ ಇದ್ದ ನನ್ನ ಮಗು ಶ್ರೀಹರಿಯನ್ನ ತೋರಿಸಿದರು,

 ಆ ಮಗು ಕೆಲಸದಾಳು ಚೆನ್ನನ ಮಗುವಿನ ಜೊತೆ ಆಟವಾಡ್ತಾ ಇತ್ತು, ಒಂದೇ ತಟ್ಟೆಯಲ್ಲಿ ಇದ್ದ ಸಿಹಿತಿಂಡಿಯನ್ನ ಹಂಚಿ ಕೊಂಡು ತಿನುತ್ತಾ ಇದ್ದವು. ಗುರುಗಳ ಮಾತಿಗೆ ಏನೂ ಹೇಳದ ಕೇಶವ ಮೂರ್ತಿಗಳು ಆ ಎರಡು ಮಕ್ಕಳನ್ನ ತನ್ನ ಎರಡೂ ತೋಳುಗಳಲ್ಲಿ ಹೊತ್ತು ಕೊಂಡು ಮನೆಯ ಗೇಟಿನ ಬಳಿ ಬಂದರು. ದೂರದಲ್ಲಿ ವಿಶ್ವ ಮತ್ತು ಅನಂತ ಕೈ ಹಿಡ್ಕೊಂಡು ಹೋಗ್ತಾ ಇರೋದು ಕಾಣಿಸ್ತು, 

“ ಮಲಗಿರುವ ನನ್ನ ಮನಸನ್ನ ಬಡಿದೆಬ್ಬಿಸಿದ ದೇವರು ನೀನು, ನನ್ನ ಹೊಸ ಹುಟ್ಟಿಗೆ ಕಾರಣನಾದ ಭಗವಂತ ನೀನು”
ಅನ್ನೊ ಉದ್ಗಾರ ತೆಗೆದರು.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ